'ಆನಂದ್' ಮನವೊಲಿಸುವಲ್ಲಿ ಸಿಎಂ ಯಶಸ್ವಿ; ಮುಂದೆ ಖಾತೆ ಬದಲಾವಣೆ ನಿರೀಕ್ಷೆಯಲ್ಲಿ ಆನಂದ್ ಸಿಂಗ್!

ಖಾತೆ ವಿಚಾರವಾಗಿ ಮುನಿಸಿಕೊಂಡು ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದ ಆನಂದ್ ಸಿಂಗ್ ರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದಾರೆ. 
ಬಸವರಾಜ ಬೊಮ್ಮಾಯಿ-ಆನಂದ್ ಸಿಂಗ್
ಬಸವರಾಜ ಬೊಮ್ಮಾಯಿ-ಆನಂದ್ ಸಿಂಗ್

ಬೆಂಗಳೂರು: ಖಾತೆ ವಿಚಾರವಾಗಿ ಮುನಿಸಿಕೊಂಡು ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದ ಆನಂದ್ ಸಿಂಗ್ ರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದಾರೆ. 

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್ ರನ್ನು ಕರೆಸಿಕೊಂಡು ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬೊಮ್ಮಾಯಿ ಅವರು ಕೊನೆಗೂ ಆನಂದ್ ರನ್ನು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಆನಂದ್ ಸಿಂಗ್ ರ ಸಂಧಾನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಆನಂದ್ ಸಿಂಗ್ ಅಸಮಾಧಾನ ವಿಚಾರ ಸದ್ಯಕ್ಕೆ ಸುಖಾಂತ್ಯವಾಗಿದೆ. ಖಾತೆ ಬದಲಾವಣೆ ಮಾಡುವಂತೆ ಆನಂದ್ ಸಿಂಗ್ ಒತ್ತಾಯಿಸಿದ್ದು ನಿಜ. ಆದರೆ ನಾವು ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. 

ಈ ಸಮಯದಲ್ಲಿ ನೀವು ಬೇಸರ ಮಾಡಿಕೊಳ್ಳುವುದು ಸರಿಯಲ್ಲ. ನೀವು ಕೇಳಿದ್ರೆ ಇನ್ನುಳಿದವರು ಕೇಳ್ತಾರೆ. ಹೀಗಾಗಿ ಖಾತೆ ಬದಲಾವಣೆ ಈಗ ಮಾಡುವುದಕ್ಕೆ ಆಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆಗೆ ಹೈಕಮಾಂಡ್ ಸಹ ಒಪ್ಪುವುದಿಲ್ಲ ಎಂದು ಮಾತುಕತೆ ವೇಳೆ ಅವರಿಗೆ ಮನವರಿಕೆ ಮಾಡಿದ್ದೇವೆ. 

ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದು ಬಗೆಹರಿಸುವುದಾಗಿ ಹೇಳಿದ್ದೇವೆ. ಅಲ್ಲದೆ ಒಮ್ಮೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುವಂತೆ ಸೂಚಿಸಿದ್ದು ಆಗಸ್ಟ್ 15ರ ಧ್ವಜಾರೋಹಣ ನಂತರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಇನ್ನು ಈ ಬಗ್ಗೆ ಆನಂದ್ ಸಿಂಗ್ ಸಹ ಸ್ಪಷ್ಟಪಡಿಸಿದ್ದು ಖಾತೆ ಬದಲಾವಣೆ ಕುರಿತಂತೆ ನಾನು ಸಿಎಂ ಬಳಿ ಮನವಿ ಮಾಡಿದ್ದೆ. ಅದಕ್ಕೆ ಅವರು ಸಹ ಒಮ್ಮತ ಸೂಚಿಸಿದ್ದಾರೆ. ಈ ಬಗ್ಗೆ ಮುಂದೆ ಮಾತಾಡೋಣ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದರು. ಇನ್ನು ನಾನು ಎಲ್ಲಿಯೂ ರಾಜಿನಾಮೆ ಕೊಡುತ್ತೇನೆ ಅಂತ ಹೇಳಿರಲಿಲ್ಲ ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com