ನೆಹರೂ ಹುಕ್ಕಾ ಬಾರ್‌: ಸಿ.ಟಿ. ರವಿ ಹೇಳಿಕೆಗೆ ಕಾಂಗ್ರೆಸ್‌ ಕೆಂಡಾಮಂಡಲ

ಮತ್ತಿನಲ್ಲಿ ಕಾರು ಗುದ್ದಿಸಿ ಇಬ್ಬರ ಪ್ರಾಣ ತೆಗೆದಾತನಿಗೆ ಸದಾ ಬಾರ್‌ನದ್ದೇ ಚಿಂತೆ ಎಂದು ಹೇಳುವ ಮೂಲಕ ಮೂಲಕ ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್‌ ಗುರುವಾರ ವಾಗ್ದಾಳಿ ನಡೆಸಿದೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಬಿಜೆಪಿ ಮುಖಂಡ ಸಿ.ಟಿ.ರವಿಯವರ ನೆಹರೂ ಹುಕ್ಕಾ ಬಾರ್ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಕೆಂಡಾಮಂಡಲಗೊಂಡಿದೆ. 

ಸಿಟಿ ರವಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ನಮ್ಮ ರಾಷ್ಟ್ರಕ್ಕಾಗಿ ನೆಹರು ಕುಟುಂಬವು ನೀಡಿದ ಸೇವೆ, ತ್ಯಾಗ ಮತ್ತು ಅಭಿವೃದ್ಧಿ ಉಪಕ್ರಮಗಳು ಬಿಜೆಪಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, ಆದರೆ ಅವರ ಹೇಳಿಕೆಗಳು ಅವರ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. 

ನೆಹರು ಕುಟುಂಬದ ತ್ಯಾಗವನ್ನು ಬಿಜೆಪಿಯಲ್ಲಿ ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಮಟ್ಟದಲ್ಲಿ ಬಿಜೆಪಿಯ ಯಾವುದೇ ನಾಯಕರು ತ್ಯಾಗ ಮಾಡಿ ತೋರಿಸಲಿದೆ. ಇಂದಿರಾ, ರಾಜೀವ್ ಗಾಂಧಿ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ನೆಹರು ಕುಟುಂಬದ ತ್ಯಾಗ ದೊಡ್ಡದು. ಅವರಂತೆ ಯಾರು ಕೂಡ ತ್ಯಾಗ ಮಾಡಿಲ್ಲ. ನೆಹರು ಕುಟುಂಬದ ಆಸ್ತಿಯನ್ನು ದಾನ ಮಾಡಿದ್ದಾರೆ. ಅದು ಸಿ.ಟಿ.ರವಿಗೆ ಗೊತ್ತಿಲ್ಲ ಕಾಣುತ್ತದೆ.

ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, ನಮಗೂ ತಮಿಳುನಾಡಿನಲ್ಲಿ ರಾಜಕೀಯ ಹೊಂದಾಣಿಕೆ ಇದೆ. ಆದರೆ ರಾಜ್ಯದ ಹಿತದ ಬಗ್ಗೆ ಬದ್ಧತೆ ಇದೆ. ಮೇಕೆದಾಟು ಕುಡಿಯುವ ನೀರಿನ ಬಗ್ಗೆ ಯಾರ ಅನುಮತಿಯೂ ಬೇಕಿಲ್ಲ. ನನ್ನ ಕ್ಷೇತ್ರದಲ್ಲಿ ಇರುವ ಮೇಕೆದಾಟು ಯೋಜನೆ ಗಮನ ನೀಡಲೇಬೇಕಿದೆ. ನಾವು ಬೊಮ್ಮಾಯಿ ಹೇಳಿಕೆ ಜೊತೆ ನಿಲ್ಲುತ್ತೇವೆ. ಯೋಜನೆಯಿಂದ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದರು.

ಇದರಂತೆ ಸಿಟಿ ರವಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಕಿಡಿಕಾರಿದರು. ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಸಿ.ಟಿ. ರವಿ ಅವರಿಗೆ, ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್ - ಹುಕ್ಕಾಬಾರ್ ನೆನಪಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗಳು ಬಿಜೆಪಿ ನಾಯಕರ‌‌ ಕಣ್ಣು ಕುಕ್ಕುತ್ತಿರುವುದು ಯಾಕೆ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದು, ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದಿರಿ, ಇಂದಿರಾ ಕ್ಯಾಂಟೀನ್ ಮುಚ್ಚಲು ನೋಡಿದಿರಿ. ಈಗ ಹೆಸರಿನ ವಿವಾದ. ಇವರ ಕೋಪ ನೆಹರೂ-ಇಂದಿರಾ ಗಾಂಧಿ ಮೇಲೆಯೋ? ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆಯೋ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್​​ ಖೇಲ್​​ರತ್ನ ಎಂದು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್​ ಹೆಸರನ್ನು ಬದಲಿಸುವಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಈ ಹಿಂದೆ ಒತ್ತಾಯಿಸಿದ್ದರು. 

ಇಂದಿರಾ ಹೆಸರು ಬದಲು ಅನ್ನಪೂರ್ಣೇಶ್ವರಿ ಹೆಸರನ್ನು ಇಡುವಂತೆ  ಆಗ್ರಹಿಸಿದ್ದು, ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್ಸಿಗರನ್ನು ಸಿ.ಟಿ.ರವಿ ಕೆರಳಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್​, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆಗೆಯಲಿ ಎಂದು ಸಿ.ಟಿ.ರವಿ ಸವಾಲೆಸೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com