ಎಂಟಿಬಿ ನಾಗರಾಜ್ ಭೇಟಿ; ಬಿಜೆಪಿಯೊಂದಿಗೆ ಯಾವುದೇ ರಾಜಕೀಯ ಸಂಬಂಧ ಇಲ್ಲ- ಸಿದ್ದರಾಮಯ್ಯ 

ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕಬೇಕು, ಅಧಿಕಾರದಿಂದ ಬಿಜೆಪಿ ತೊಲಗಬೇಕೆಂದು ಬಯಸುವ ನನಗೆ ಬಿಜೆಪಿಯವರೊಂದಿಗೆ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಎಂಟಿಬಿ ನಾಗರಾಜ್ ಮತ್ತಿತರೊಂದಿಗೆ ಸಿದ್ದು ಊಟ ಮಾಡುತ್ತಿರುವ ಚಿತ್ರ
ಎಂಟಿಬಿ ನಾಗರಾಜ್ ಮತ್ತಿತರೊಂದಿಗೆ ಸಿದ್ದು ಊಟ ಮಾಡುತ್ತಿರುವ ಚಿತ್ರ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕಬೇಕು, ಅಧಿಕಾರದಿಂದ ಬಿಜೆಪಿ ತೊಲಗಬೇಕೆಂದು ಬಯಸುವ ನನಗೆ ಬಿಜೆಪಿಯವರೊಂದಿಗೆ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಶುಕ್ರವಾರ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಬಹುದಿನಗಳ ಬಳಿಕ ಒಂದೇ ಸಮುದಾಯದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಟ್ಟಿಗೆ ಊಟವನ್ನು ಮಾಡಿದ್ದರು.ಸಂಪುಟದಲ್ಲಿ ಇಚ್ಛಿಸಿದ್ದ ಖಾತೆ ಸಿಗಲಿಲ್ಲವೆಂಬ ಎಂಟಿಬಿ ಬೇಸರ ಭಾರಿ ಸುದ್ದಿಯಾಗಿತ್ತು. ಇವರಿಬ್ಬರೂ ಹೀಗೆ ಜೊತೆಯಾಗಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ರಾಜಕೀಯವಾಗಿ ಬೇರೆಯದ್ದೇ ಸಂದೇಶ  ಸಾರಿತ್ತು.

ಈ ಭೇಟಿ ಬಗ್ಗೆ ಬೆಂಗಳೂರಿನಲ್ಲಿ ಶನಿವಾರ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಾನು ಮತ್ತು ಸಚಿವ ಎಂಟಿಬಿ ನಾಗರಾಜ್ ಶುಕ್ರವಾರ ಹೊಸಕೋಟೆಯಲ್ಲಿ ಭೇಟಿಯಾಗಿದ್ದುದು ನಿಜ. ಆದರೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಏಕೆಂದರೆ ನಾನು ಬಿಜೆಪಿಯವರ ಜೊತೆ ರಾಜಕೀಯ ಮಾತನಾಡುವುದೂ ಇಲ್ಲ. ಬಿಜೆಪಿ ಅಧಿಕಾರದಿಂದ ತೊಲಗಲಿ ಎಂದು ಹೇಳುವವನು ನಾನು ಎಂದರು.

ಕನಕ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹೊಸಕೋಟೆಗೆ ಹೋಗಿದ್ದೆ. ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಊಟ ಇತ್ತು. ನಾಗರಾಜ್ ಸಹ ಅಲ್ಲಿಗೆ ಬಂದಿದ್ದರು. ಇದು ಸೌಹಾರ್ದಯುತ ಔತಣದ ಭೇಟಿಯಷ್ಟೆ. ನಮ್ಮೊಂದಿಗರ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ, ಶಾಸಕರಾದ ಬೈರತಿ ಸುರೇಶ್ ಶರತ್ ಬಚ್ಚೇಗೌಡ ಸಹ ಇದ್ದರು ಎಂದು ತಿಳಿಸಿದರು. 

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಿದ್ಧವಾಗಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಅಂದಿನ ಸಚಿವ ಪುಟ್ಟರಂಗ ಶೆಟ್ಟಿಯವರು ವರದಿ ಮಂಡನೆಗೆ ಮುಂದಾದಾಗ ಅವಕಾಶ ಕೊಡಲಿಲ್ಲ. ಈಗ ಈಶ್ವರಪ್ಪ ಸಚಿವರಾಗಿದ್ದಾರೆ, ಅವರು ವರದಿ ಸ್ವೀಕಾರ ಆಗುವಂತೆ ಮಾಡಲಿ. ರಾಯಣ್ಣ ಬ್ರಿಗೇಡ್, ಕುರುಬರ ಎಸ್ ಟಿ ಹೋರಾಟದ ಜೊತೆಗೆ ಈ ಕೆಲಸಕ್ಕೂ ಅವರು ಮುಂದಾಗಲಿ, ವರದಿ ಮಂಡನೆಗೆ ನಿರಾಕರಿಸಿದಾಗ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿ ಆಗಿರಲಿಲ್ಲ, ಸಮನ್ವಯ ಸಮಿತಿ ಅಧ್ಯಕ್ಷ ಆಗಿದ್ದೆ. ರಾಜಿನಾಮೆ ಪರಿಹಾರ ಎಂದಾಗಿದ್ದರೆ ಕೊಡುತ್ತಿದೆ ಎಂದರು.

ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಅತಿ ಹಿಂದುಳಿದ ವರ್ಗಗಳ ವೇದಿಕೆ ಈಗ ವರದಿ ಸ್ವೀಕಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡುತ್ತಿದೆ. ಹೋರಾಟ ನಡೆಯಲಿ. ಬಳಿಕ ನಾನು ಮಾತನಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com