ಉಪ ಮುಖ್ಯಮಂತ್ರಿ ಹುದ್ದೆ ಪರಿಕಲ್ಪನೆಗೆ ಎಳ್ಳು-ನೀರು ಬಿಡಲು ಬಿಜೆಪಿ ತೀರ್ಮಾನ!
ಪಕ್ಷ ಸಂಘಟನೆ ಬಲಪಡಿಸುವುದು, ಗುಂಪುಗಾರಿಕೆ, ಜಾತಿಯತೆ ಆರ್ಭಟ ತಡೆಯುವ ಉದ್ದೇಶದಿಂದ ಇನ್ನು ಮುಂದೆ ಉಪ ಮುಖ್ಯಮಂತ್ರಿ ಹುದ್ದೆ ಪರಿಕಲ್ಪನೆಗೆ ಎಳ್ಳು- ನೀರು ಬಿಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.
Published: 17th August 2021 11:12 AM | Last Updated: 17th August 2021 01:18 PM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು
ಬೆಂಗಳೂರು: ಪಕ್ಷ ಸಂಘಟನೆ ಬಲಪಡಿಸುವುದು, ಗುಂಪುಗಾರಿಕೆ, ಜಾತಿಯತೆ ಆರ್ಭಟ ತಡೆಯುವ ಉದ್ದೇಶದಿಂದ ಇನ್ನು ಮುಂದೆ ಉಪ ಮುಖ್ಯಮಂತ್ರಿ ಹುದ್ದೆ ಪರಿಕಲ್ಪನೆಗೆ ಎಳ್ಳು- ನೀರು ಬಿಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಬಿ. ಎಸ್ . ಯಡಿಯೂರಪ್ಪ ಅವರ ಕಾಲದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿತ್ತು. ಪಕ್ಷದ ಸಂಘಟನೆ ಗಿಂತಲೂ ಹೆಚ್ಚಾಗಿ, ಯಡಿಯೂರಪ್ಪ ಅವರನ್ನು ನಿಯಂತ್ರಣ ಮಾಡುವ ಉದ್ದೇಶವೇ ಇದರಲ್ಲಿ ಅಡಗಿತ್ತು ಎಂಬುದು ಬಿಜೆಪಿಯ ಮೂಲಗಳಿಂದಲೇ ಸ್ಪಷ್ಟವಾಗಿದೆ.
ಯಡಿಯೂರಪ್ಪ ಅವರ ಕಾಲದಲ್ಲಿ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಲಾಗಿತ್ತು. ಯಡಿಯೂರಪ್ಪ ಅವರನ್ನು ಹದ್ದುಬಸ್ತಿನಲ್ಲಿ ಇಡುವುದರ ಜೊತೆಗೆ ಪಕ್ಷದ ಸಂಘಟನೆಗೂ ಇದು ಕೊಂಚ ಮಟ್ಟಿಗೆ ನೆರವಾಗಬಹುದು ಎಂಬ ಸಣ್ಣ ರಾಜಕೀಯ ಲೆಕ್ಕಚಾರವೂ ಇದರ ಹಿಂದೆ ಅಡಗಿತ್ತು. ಆದರೆ, ಪಕ್ಷದ ಸಂಘಟನೆ ವಿಚಾರದಲ್ಲಿ ಕೇಂದ್ರದ ನಾಯಕರು ನಿರೀಕ್ಷೆ ಮಾಡಿದಷ್ಟು ಕೆಲಸ ನಡೆಯಲಿಲ್ಲ.
ಲಕ್ಷ್ಮಣ ಸವದಿ ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದು ಹಲವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದರ ಜೊತೆಗೆ ಹುದ್ದೆ ಪಡೆಯಲು ಶಾಸಕರಲ್ಲಿ ಗುಂಪುಗಾರಿಕೆ, ಜಾತಿಯ ಒತ್ತಡಗಳು ಹೆಚ್ಚಾಗುತ್ತಿದ್ದವು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಕೇಂದ್ರದ ಬಿಜೆಪಿ ನಾಯಕರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಮಾಡುವುದುನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬೊಮ್ಮಾಯಿ ಸಂಪುಟದಲ್ಲಿ ಇನ್ನೂ ನಾಲ್ಕು ಸಚಿವ ಸ್ಥಾನಗಳು ಖಾಲಿಯಿದ್ದರೂ ಹಿಂದಿನ ಅನುಭವದ ಆಧಾರದಲ್ಲಿ ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿ ಹುದ್ದೆಯನ್ನು ಮುಂದೆ ಯಾರಿಗೂ ನೀಡದಿರಲು ತೀರ್ಮಾನಕ್ಕೆ ಬರಲಾಗಿದೆ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ 1992ರಲ್ಲಿ ಎಸ್ ಎಂ ಕೃಷ್ಣ ರಾಜ್ಯದ ಮೊಟ್ಟ ಮೊದಲ ಉಪ ಮುಖ್ಯಮಂತ್ರಿಯಾಗಿದ್ದರು.
ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಹೆಚ್ಚು ಕಾಲ ಅಧಿಕಾರ ನಡೆಸಿದ ಹಾಗೂ ದೇವರಾಜ ಅರಸು ನಂತರ ಐದು ವರ್ಷಗಳ ಕಾಲ ಅಧಿಕಾರವಧಿಯನ್ನು ಪೂರ್ಣ ಮಾಡಿದ ಏಕೈಕ ಸಿಎಂ ಕೀರ್ತಿಗೂ ಭಾಜನರಾಗಿದ್ದಾರೆ. ಜೆ. ಹೆಚ್. ಪಟೇಲ್ ಮತ್ತು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು.
ಯಡಿಯೂರಪ್ಪ ರಾಜೀನಾಮೆ ನಂತರ ಮುಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆರ್. ಅಶೋಕ್ ಮತ್ತು ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದಿಂದ ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದರು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದು, ರಾಜಕೀಯ ಇತಿಹಾಸಕ್ಕೂ ಕಾರಣವಾಗಿದೆ.