ಸಂಸದೆ ಸುಮಲತಾ ಸುತ್ತ ಗೂಂಡಾಗಳು, ವಂಚಕರಿದ್ದಾರೆ: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ
ಸಂಸದೆ ಸುಮಲತಾ ಸುತ್ತ ಇರುವವರೆಲ್ಲ ಅಕ್ರಮದವರೇ. ಗೂಂಡಾಗಳ ರೀತಿ ವರ್ತಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಾಡಿದ್ದಾರೆ.
Published: 19th August 2021 11:12 AM | Last Updated: 19th August 2021 01:02 PM | A+A A-

ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ
ಮಂಡ್ಯ: ಸಂಸದೆ ಸುಮಲತಾ ಸುತ್ತ ಇರುವವರೆಲ್ಲ ಅಕ್ರಮದವರೇ. ಗೂಂಡಾಗಳ ರೀತಿ ವರ್ತಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾ ಅವರ ಬಳಿ ಕೆಲಸ ಮಾಡುವ ಆಪ್ತ ಸಹಾಯಕರನ್ನು ಬಂಧಿಸಿ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ವಿರುದ್ಧ ಕೂಡ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಸುಮಲತಾ ಅವರ ಅಧಿಕಾರ ದುರುಪಯೋಗವಾಗುತ್ತಿದೆ. ಅವರ ಲೆಟರ್ ಹೆಡ್ ಗಳನ್ನು ಬಳಸಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಅಧಿಕಾರಿಗಳ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಅಧಿಕಾರಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ, ಇದು ಸುಮಲತಾ ಅವರ ಗಮನಕ್ಕೆ ಬಂದಿರಬಹುದು, ಹಾಗಾಗಿ ಅವರೆಲ್ಲರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಸುಮಲತಾ ಅವರ ಜೊತೆ ಕೆಲಸ ಮಾಡುತ್ತಿರುವ ಚೇತಕ್ ಎಂಬ ಹುಡುಗ ಮೆಡಿಕಲ್ ಸೀಟು ಕೊಡಿಸುತ್ತೇನೆಂದು ಹೇಳಿ ವಂಚನೆ ಎಸಗುತ್ತಿದ್ದಾನೆ. ಅಂತವನನ್ನು ಸುಮಲತಾ ಅವರು ಆಪ್ತ ಸಹಾಯಕನೆಂದು ಇರಿಸಿಕೊಂಡಿದ್ದಾರೆ. ಶ್ರೀನಿವಾಸ್ ಭಟ್ ಕೂಡ ಅಧಿಕಾರಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್, ಸೂಪರಿಂಟೆಂಡೆಂಟ್ ಗಳನ್ನು ದಬಾಯಿಸಿ ಮಾತನಾಡುತ್ತಿದ್ದಾರೆ. ಒತ್ತಡ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸುಮಲತಾ ಮತ್ತು ಅವರ ಸುತ್ತಮುತ್ತಲವರಿಂದ ಜಿಲ್ಲೆಯ ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮದವರನ್ನಿಟ್ಟುಕೊಂಡು ಹೀಗೆ ಏಕೆ ಅಧಿಕಾರ ಚಲಾಯಿಸುತ್ತಿದ್ದೀರಿ ಎಂದು ಎದುರುಗಡೆಯಿಂದ ಕೇಳಿದರೆ ಉತ್ತರ ಬರುತ್ತಿಲ್ಲ, ಮಾಧ್ಯಮ ಪ್ರತಿನಿಧಿಗಳೇ ಇದಕ್ಕೆಲ್ಲಾ ಸಾಕ್ಷಿ. ಕೂಡಲೇ ಸಂಸದೆಯ ಸಹಾಯಕರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕರೆಗಳ ತನಿಖೆ ಮಾಡಲಿ: ಸಂಸದೆ ಸುಮಲತಾ ಮತ್ತು ಅವರ ಜೊತೆ ಕೆಲಸ ಮಾಡುವ ಆಪ್ತ ಸಹಾಯಕರು ಕಳೆದ ಎರಡು ತಿಂಗಳಿನಿಂದ ಯಾರ್ಯಾರಿಗೆ ಕರೆ ಮಾಡಿದ್ದಾರೆ ಎಂದು ತನಿಖೆಯಾಗಿ ಬಂಧನವಾಗಬೇಕು. ಇದನ್ನು ನಾವಿಲ್ಲಿಗೇ ಬಿಡುವುದಿಲ್ಲ, ಯಾವ ಅಧಿಕಾರಿಗಳ ಗಮನಕ್ಕೆ ತರಬೇಕೋ ತರುತ್ತೇವೆ, ಜಿಲ್ಲಾಡಳಿತ ಸಂಪೂರ್ಣವಾಗಿ ಕುಸಿದಿದೆ, ಉಸ್ತುವಾರಿ ಮಂತ್ರಿಗಳೂ ಗಮನ ಹರಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಈ ಎಲ್ಲಾ ಘಟನೆಗಳು ಸಂಸದೆಯ ಗಮನಕ್ಕೆ ಬಂದಿರುತ್ತದೆ. ಆದರೂ ಅವರು ಸುಮ್ಮನೆ ಕುಳಿತಿದ್ದಾರೆ, ಹೀಗಾಗಿ ಅವರ ವಿರುದ್ಧ ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.