ಮುಂದುವರಿದ 'ಆನಂದ' ಮುನಿಸು: ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಗೆ ಗೈರು!
ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಮುನಿಸು ಮುಂದುವರಿದಿದೆ ಎಂದು ಮತ್ತೊಂದು ಸ್ಪಷ್ಟವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆನಂದ್ ಸಿಂಗ್ ಗೈರಾಗಿದ್ದಾರೆ.
Published: 19th August 2021 12:34 PM | Last Updated: 19th August 2021 01:04 PM | A+A A-

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆನಂದ್ ಸಿಂಗ್(ಸಂಗ್ರಹ ಚಿತ್ರ)
ಬೆಂಗಳೂರು: ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಮುನಿಸು ಮುಂದುವರಿದಿದೆ ಎಂದು ಮತ್ತೊಂದು ಸ್ಪಷ್ಟವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆನಂದ್ ಸಿಂಗ್ ಗೈರಾಗಿದ್ದಾರೆ.
ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಇಂದು ವಿಧಾನಸೌಧದಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಮೊದಲ ಸಭೆ ನಡೆಸಿದ್ದಾರೆ. ತಮ್ಮ ಇಲಾಖೆಯ ಕೆಲಸ ಕಾರ್ಯಗಳ ಆರಂಭ ದೃಷ್ಟಿಯಿಂದ ಈ ಸಭೆ ಪ್ರತಿಯೊಬ್ಬ ಸಚಿವರಿಗೂ ಮುಖ್ಯವಾಗುತ್ತದೆ. ಆದರೆ ಈ ಸಭೆಗೂ ಸಚಿವ ಆನಂದ್ ಸಿಂಗ್ ಗೈರಾಗಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನ, ಮುನಿಸನ್ನು ಮುಂದುವರಿಸಿದ್ದಾರೆ.
ಖಾತೆಯ ಬಗ್ಗೆ ಖ್ಯಾತೆ ತೆಗೆಯದೆ ಸಿಕ್ಕಿರುವ ಖಾತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುವಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆನಂದ್ ಸಿಂಗ್ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ತಮ್ಮ ಕೈಯಲ್ಲಿ ಏನೂ ಇಲ್ಲ, ಬೇಕಿದ್ದರೆ ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಿ ಎಂದು ಸಿಎಂ ಆನಂದ್ ಸಿಂಗ್ ಅವರಿಗೆ ಈಗಾಗಲೇ ಹೇಳಿದ್ದಾರೆ.
ಈ ಮೂಲಕ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕೂಡ ನಾಯಕರಿಗೆ ತೃಪ್ತಿಯಿಲ್ಲ, ಅಸಮಾಧಾನ,ಅತೃಪ್ತಿ, ಮುನಿಸು ಮುಂದುರಿದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದು ಬೊಮ್ಮಾಯಿಯವರಿಗೂ ತಲೆನೋವಾಗಿದೆ. ಈ ಮಧ್ಯೆ ನಿನ್ನೆ ಆನಂದ್ ಸಿಂಗ್ ಗೋವಾಕ್ಕೆ ಹೋಗಿದ್ದರು, ಅಲ್ಲಿಂದ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಕಚೇರಿಗೆ ನಾಮಫಲಕ: ನಿನ್ನೆ ವಿಕಾಸಸೌಧದ 36 ಮತ್ತು 37ನೇ ಸಂಖ್ಯೆಯ ಕೊಠಡಿಯಲ್ಲಿ ಅವರ ಹೆಸರಿನ ಜೊತೆ ಖಾತೆಯ ವಿವರದ ನಾಮಫಲಕವನ್ನು ಹಾಕಲಾಗಿದೆ. ಆದರೆ ಆನಂದ್ ಸಿಂಗ್ ಮಾತ್ರ ಇದುವರೆಗೆ ವಿಕಾಸಸೌಧದ ತಮ್ಮ ಕಚೇರಿ ಕಡೆ ತಲೆ ಹಾಕಿಲ್ಲ. ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಇನ್ನೂ ಆರಂಭಿಸಿಲ್ಲ. ಇದು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನತ್ತ ಹೊರಳಲಿದೆ, ನಾಯಕರು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ.