ಸಿಎಂ ಬೊಮ್ಮಾಯಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಪ್ರಾಮಾಣಿಕ ಶಾಸಕರ ಸೇರ್ಪಡೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ. 
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಕಲಬುರಗಿ: ಪ್ರಾಮಾಣಿಕ ಶಾಸಕರ ಸೇರ್ಪಡೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಲ್ಕು ಮಂತ್ರಿಗಳ ಸ್ಥಾನ ಖಾಲಿ ಇರುವುದರಿಂದ, ಕಲಬುರಗಿಯಿಂದ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಸ್ಥಾನ ನೀಡಲು ಮುಖ್ಯಮಂತ್ರಿಗಳು ಚಿಂತನೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ. 

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರ ನಿಗಮಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಿಗದಿಯಾಗಿದ್ದು, ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ಜನಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಮತ್ತು ಎಲ್ಲಾ ಮೂರು ನಗರ ಸಂಸ್ಥೆಗಳಲ್ಲಿ ಬಹುಮತ ಗಳಿಸುವ ವಿಶ್ವಾಸವಿದೆ. ನಾವು ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿ, ಕಳೆದ ಏಳು ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ವರದಿಯಾಗಿಲ್ಲ. ಭಯೋತ್ಪಾದನೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ತನ್ನ ನೀತಿಯಲ್ಲಿ ಬಿಜೆಪಿ ದೃಢವಾಗಿದೆ. ಸ್ವದೇಶಕ್ಕೆ ಮರಳಲು ಬಯಸಿದ ಎಲ್ಲಾ ಭಾರತೀಯರನ್ನು ಭಾರತಕ್ಕೆ ವಿಮಾನದಲ್ಲಿ ಕರೆತರಲಾಗುತ್ತಿದೆ ಮತ್ತು ಕೆಲವರು ಈಗಾಗಲೇ ಕರ್ನಾಟಕಕ್ಕೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. 

ನಾಯಕತ್ವ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರೇ ತಾವಾಗಿಯೇ ಪದತ್ಯಾಗ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದರು.

ಜನ ಆಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಬೆಂಬಲಿಗರು ಸ್ವಾಗತಿಸಿದ ಪ್ರಕರಣ ಕುರಿತು ಮಾತನಾಡಿ,“ರೈಫಲ್‌ಗಳಲ್ಲಿ ಯಾವುದೇ ಗುಂಡುಗಳಿರಲಿಲ್ಲ. ಸಂಭ್ರಮ ಆಚರಣೆಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ಸಾಮಾನ್ಯ ಎಂದಿದ್ದಾರೆ. 

ಜನ ಆಶೀರ್ವಾದ ಯಾತ್ರೆಗಳಲ್ಲಿ ಪಕ್ಷದ ಕಾರ್ಯಕರ್ತರ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿ, ಎಲ್ಲಾ ನಿಯಮಗಳನ್ನು ಅನುಸರಿಸಿಯೇ ಯಾತ್ರೆ ನಡೆಸಲು ಆಯೋಜಿಸಲಾಗಿತ್ತು. ಆದರೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ನಿಯಮ ಉಲ್ಲಂಘನೆಯಾಗಿದೆ. ಈ ನಿಯಮ ಉಲ್ಲಂಘನೆ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com