ರಾಜ್ಯದ ನೀರಾವರಿ ವಿಚಾರದಲ್ಲಿ ಜೆಡಿಎಸ್ ನಿರಂತರ ಹೋರಾಟ: ಎಚ್ ಡಿ ದೇವೇಗೌಡ

ರಾಜ್ಯದ ನೀರಾವರಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: ರಾಜ್ಯದ ನೀರಾವರಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ನದಿ ನೀರು ವಿಚಾರವಾಗಿ ಮಹಾರಾಷ್ಟ್ರದ ನಾಯಕರೊಂದಿಗೆ ಮಾತನಾಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಆಶಯವ್ಯಕ್ತಪಡಿಸಿದರು. ಒಂದು ವೇಳೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದರೆ ಜೆಡಿಎಸ್ ಪಕ್ಷ ಹೋರಾಟ ಮಾಡಲಿದ್ದು, ಕೃಷ್ಣ ತೀರದಿಂದ ಪಾದಯಾತ್ರೆ ಮಾಡುವುದಾಗಿ ಹೇಳಿದರು. 

ಕೃಷ್ಣ ನದಿ ನೀರು ಹಂಚಿಕೆ ಬಗ್ಗೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿವಾದ ಬಗೆಹರಿಸಿಕೊಳ್ಳುತ್ತೇವೆಂದು ಅವರು ಹೇಳಿರುವುದು ಸಂತಸ ತಂದಿದೆ. ಈ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ 3 ರಾಜ್ಯಗಳು ಅರ್ಜಿ ಸಲ್ಲಿಸಿವೆ. ಈ ಬಗ್ಗೆ ಶರದ್ ಪವಾರ್, ಜೆಡಿಎಸ್ ಮುಖಂಡರ ಜತೆ ಚರ್ಚಿಸುವೆ. ಆಲಮಟ್ಟಿ ವಿಚಾರ ಇಂದು ನಿನ್ನೆಯದಲ್ಲ. ಆಲಮಟ್ಟಿಯಿಂದ ಪಾದಯಾತ್ರೆಗೆ ಜೆಡಿಎಸ್​ ನಿರ್ಧರಿಸಿದೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ವಿಚಾರವಾಗಿ ಇನ್ನೊಂದು ತಂಡ ಬರಬೇಕು. ರಾಜ್ಯದ 3 ನೀರಾವರಿ ಯೋಜನೆಗಳು ಹೀಗೆಯೇ ಆಗಿದೆ. ಮಹದಾಯಿ ನಮ್ಮಲ್ಲೇ ಶುರುವಾಗಿ ಮಹಾರಾಷ್ಟ್ರದಲ್ಲೂ ಇದೆ. 3 ಯೋಜನೆ ಬಗ್ಗೆ ಸುಮ್ಮನೆ ಕೂತರೆ ಆಗಲ್ಲವೆಂದು ನಿರ್ಧಾರ ಮಾಡಲಾಗಿದೆ. ನಾನೂ ಕೂಡ ಸಾಂಕೇತಿಕವಾಗಿ ಒಂದು ದಿನ ಹೋಗುತ್ತೇನೆ. ನಮಗೆ ಯಾರ ಮೇಲೂ ದ್ವೇಷವಿಲ್ಲ. ಮೇಕೆದಾಟು ಯೋಜನೆಯಲ್ಲಿ ಉಳಿದ ನೀರು ಬಿಡ್ತೇವೆ ಅಂದರೂ ಬಿಡ್ತಿಲ್ಲ/ ಈ ಬಗ್ಗೆ, ಪಾದಯಾತ್ರೆ ಆರಂಭಿಸಿದ ಬಳಿಕ ಆ ಭಾಗದವರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಜೆಡಿಎಸ್​ ಪ್ರಾದೇಶಿಕ ಪಕ್ಷವಾಗಿ ಸಮಸ್ಯೆ ಬಗೆಹರಿಸಬೇಕು. ಕಾಂಗ್ರೆಸ್, ಬಿಜೆಪಿಗೆ ಇಲ್ಲಿ ಸಮಸ್ಯೆಯಿದೆ. ದೆಹಲಿಯಲ್ಲಿ ಆಡಳಿತದಲ್ಲಿರುವವರಿಂದ ಹೋರಾಟ ಅಸಾಧ್ಯ ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಡಾ. ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದರು. ಹಣ ಒದಗಿಸಲು ನಾನು ಮಾಡಿದ್ದ ನಿರ್ಣಯ ಮುಂದುವರಿದಿದೆ. ಯಾರೂ ಇದನ್ನು ತೆಗೆಯಲಿಲ್ಲ, ಆದ್ರೆ ಸ್ವಲ್ಪ ಕಡಿಮೆಮಾಡಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಹೆಸರಿಗೂ ಇರೋದಿಲ್ಲ ಅಂತಾರೆ. ಹಳೆ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಇದೆ ಅನ್ನೋ ಭಾವನೆ ಇದೆ. ಹೋರಾಟಮಾಡಿ ಅಸ್ತಿತ್ವ ಉಳಿಸಿಕೊಂಡು ಅಧಿಕಾರಕ್ಕೆ ಬರ್ತೇವೆ. ಪಕ್ಷದ ಹಿರಿಯ ನಾಯಕನಾಗಿ ಹೋರಾಟದಲ್ಲಿ ಭಾಗಿಯಾಗುವೆ. ಪಾದಯಾತ್ರೆ ಸಂಘಟಿಸುತ್ತೇವೆ. ಅಧಿವೇಶನ ಮುಗಿದ ನಂತರ ಪಾದಯಾತ್ರೆಗೆ ದಿನಾಂಕ ನಿಗದಿ ಮಾಡುತ್ತೇನೆ. ಪಾದಯಾತ್ರೆ ಉದ್ಘಾಟನೆಗೆ ಹೋಗುತ್ತೇನೆ. ಕರ್ನಾಟಕದ ಹಲವು ಜಿಲ್ಲೆಗಳಿಗೆ ಸ್ವತಃ ನಾನೇ ಹೋಗುತ್ತಿದ್ದೇನೆ ಎಂದು  ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳು ಅವರವರ ರಾಜ್ಯಗಳಿಗಷ್ಟೇ ಸೀಮಿತವಾಗಿವೆ
ಎಲ್ಲಾ ವಿಪಕ್ಷಗಳು ಒಂದಾಗಿ ಮೋದಿಯನ್ನ ಕಟ್ಟಿಹಾಕುವುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ, ಯಾರೂ ಯಾರನ್ನೂ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳು ಅವರವರ ರಾಜ್ಯಗಳಿಗಷ್ಟೇ ಸೀಮಿತವಾಗಿವೆ. ರಾಹುಲ್ ಯುವ ನಾಯಕ, ಅವರ ಬಗ್ಗೆ ಲಘುವಾಗಿ ಮಾತಾಡಲ್ಲ. ರಾಹುಲ್ ಪಾರ್ಲಿಮೆಂಟ್‌ವರೆಗೆ ಸೈಕಲ್ ಯಾತ್ರೆ ಮಾಡಿದರು. ಜನರು ಕಷ್ಟದಲ್ಲಿದ್ದಾರೆಂದು ರಾಹುಲ್ ಗಾಂಧಿ ತೋರಿಸಿದರು. ಅವರ ನಾಯಕತ್ವಕ್ಕೆ ಎಷ್ಟು ಶಕ್ತಿ ಬರುತ್ತೆ ಎಂದು ಗೊತ್ತಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.

ದೇವೇಗೌಡರನ್ನು ಸಿಎಂ ಬೊಮ್ಮಾಯಿ ಭೇಟಿಯಾದ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಡ್ರಾಮಾ ಮಾಡುವುದಕ್ಕೆ ಬರಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನನ್ನ ಮನೆಗೆ ಬಂದಿದ್ದರು. ಕಷ್ಟ ಬಂದಾಗ ನನ್ನನ್ನು ಸಂಪರ್ಕ ಮಾಡು ಎಂದು ಹೇಳಿದ್ದೇನೆ. ಆದರೆ ಅಂತಹದ್ದಕ್ಕೆ ಅವಕಾಶ ನೀಡಬೇಡ ಎಂದು ಹೇಳಿರುವೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವಂತೆ ಹೇಳಿರುವೆ ಎಂದು ದೇವೇಗೌಡ ಹೇಳಿದ್ದಾರೆ.

ಸಂಸತ್ ಅಧಿವೇಶನದ ಬಗ್ಗೆ ದೇವೇಗೌಡ ಬೇಸರ
ಈ ಬಾರಿ 27 ದಿನ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಿತು. ಅದರಲ್ಲಿ ಒಂದು ದಿನವೂ ಅಧಿವೇಶನಕ್ಕೆ ಗೈರಾಗಿರಲಿಲ್ಲ. ನನಗೆ ಮಾತನಾಡುವ ಅವಕಾಶ ಸಿಗುತ್ತೆಂದು ಕಾಯುತ್ತಿದ್ದೆ. ದುರಂತ ಅಂದರೆ ಸುಗಮವಾಗಿ ಅಧಿವೇಶನವೇ ನಡೆಯಲಿಲ್ಲ. ಆಳುವ, ವಿಪಕ್ಷಗಳು ಅಧಿವೇಶನ ನಡೆಯಲು ಬಿಡಲಿಲ್ಲ. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಗಲಾಟೆ ಮಾಡುತ್ತಿದ್ದವು. ಯಾವುದೇ ಚರ್ಚೆ ಮಾಡದೆ ಬಿಲ್ ಪಾಸ್ ಮಾಡಿಕೊಂಡರು. ಒಂದು ಬಿಲ್ ಪಾಸ್ ಸಂಬಂಧ 3 ಗಂಟೆ ಚರ್ಚೆ ಮಾಡಿದರು. ಅದರಲ್ಲಿ ಮಾತ್ರ ನಾನು ಭಾಗಿಯಾದೆ. ಒಂದಷ್ಟು ಸದಸ್ಯರು ಸದನದಲ್ಲಿ ಡ್ಯಾನ್ಸ್ ಕೂಡ ಮಾಡಿದ್ದರು. ಇತಿಹಾಸದಲ್ಲಿಯೇ ಇಂತಹ ಘಟನೆ ನಾನು ನೋಡಿರಲಿಲ್ಲ. ಬೇರೆ ಬೇರೆ ರಾಷ್ಟ್ರದಲ್ಲಿಯೂ ಏನಾಯ್ತು ಅಂತ ಗಮನದಲ್ಲಿದೆ. ಆದ್ರೆ ಟೇಬಲ್ ಮೇಲೆ ನಿಂತು ಡಾನ್ಸ್ ಮಾಡಿದ್ದು ನೋಡಿರಲಿಲ್ಲ. ಇಂತಹ ಘಟನೆಗಳು ಒಳ್ಳೆಯ ಲಕ್ಷಣಗಳಲ್ಲ. ರಾಜ್ಯಸಭೆಯಲ್ಲಿ ಹೇಗೆ ಸಮಯ ಕಳೆಯಬೇಕೆಂದು ಗೊತ್ತಿಲ್ಲ. ಸದನದಲ್ಲಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಹೆಚ್.ಡಿ.ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಅಮೆರಿಕ ಅಧ್ಯಕ್ಷರು ಮುಂದಾಲೋಚನೆ ಮಾಡಬೇಕಾಗಿತ್ತು
ತಾಲಿಬಾನ್​ ಉಗ್ರರ ಕಪಿಮುಷ್ಟಿಯಲ್ಲಿರುವ ಅಫ್ಘಾನಿಸ್ತಾನದ ಬಗ್ಗೆ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರು ಮುಂದಾಲೋಚನೆ ಮಾಡಬೇಕಾಗಿತ್ತು. ಸೇನೆ ಕರೆಸಿಕೊಂಡರೆ ಏನಾಗುತ್ತೆ ಎಂದು ಯೋಚಿಸಬೇಕಿತ್ತು. ಡೊನಾಲ್ಡ್ ಟ್ರಂಪ್​​ಗೂ ಜೋ ಬೈಡೆನ್​ಗೂ ವ್ಯತ್ಯಾಸವಿದೆ. ಅಮೆರಿಕ ಸೈನಿಕರು 20 ವರ್ಷಗಳ ಕಾಲ ಹೋರಾಡಿದ್ದಾರೆ. ಹೋರಾಟಕ್ಕೆ 3 ಟ್ರಿಲಿಯನ್​ ಡಾಲರ್ ಹಣ ವ್ಯಯವಾಗಿದೆ. ಆಫ್ಘನ್​ಗೆ ನಾವ್ಯಾಕೆ ಸಪೋರ್ಟ್ ಮಾಡಬೇಕೆಂದು ನಿರ್ಧಾರ ಮಾಡಿ, ಆಫ್ಘನ್​ನಿಂದ ಅಮೆರಿಕ ತನ್ನ ಸೇನೆ ವಾಪಸ್ ಕರೆಸಿಕೊಂಡಿದೆ. ರಷ್ಯಾ, ಚೀನಾ, ಪಾಕಿಸ್ತಾನ, ಟರ್ಕಿ ಜೊತೆ ನಿಂತವರು ಯಾರು? ತಾಲಿಬಾನ್​ ಹೊಸಬರಲ್ಲ, ನಾನು ಪ್ರಧಾನಿ ಆಗಿದ್ದಾಗಲೂ ಇತ್ತು. ನನ್ನ ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ರಬ್ಬಾನಿ ಅಂತ ಅಧ್ಯಕ್ಷರಿದ್ದರು. 2001 ರವರೆಗೆ ಅಧ್ಯಕ್ಷ ರಬ್ಬಾನಿ ಹತೋಟಿಗೆ ತೆಗೆದುಕೊಂಡಿದ್ದ. ನಂತರ ಅಮೆರಿಕ ದೇಶದ ಸೈನಿಕರು ಚುರುಕಾಗಿ ಕೆಲಸಮಾಡಿದ್ರು. ಅಫ್ಘಾನಿಸ್ತಾನ ದೊಡ್ಡ ಬೆಟ್ಟ ಗುಡ್ಡಗಳು ಇರುವಂತಹ ಪ್ರದೇಶ ಎಂದು ದೇವೇಗೌಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com