ಖಾತೆ ಕ್ಯಾತೆ ಸುಖಾಂತ್ಯ: ಪ್ರವಾಸೋದ್ಯಮ ಸಚಿವರಾಗಿ 'ಆನಂದ' ಸಿಂಗ್ ಅಧಿಕಾರ ಸ್ವೀಕಾರ

ಖಾತೆ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಕಠಿಣ ಮಾತುಗಳನ್ನಾಡುತ್ತಿದ್ದ ಸಚಿವ ಆನಂದ್ ಸಿಂಗ್ ಅವರ ಮುನಿಸು ಸದ್ಯಕ್ಕೆ ಶಮನಗೊಂಡಿರುವ ಬೆಳವಣಿಗೆಗಳು ಕಂಡು ಬಂದಿವೆ. 
ಆನಂದ್ ಸಿಂಗ್
ಆನಂದ್ ಸಿಂಗ್

ಬೆಂಗಳೂರು: ಖಾತೆ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಕಠಿಣ ಮಾತುಗಳನ್ನಾಡುತ್ತಿದ್ದ ಸಚಿವ ಆನಂದ್ ಸಿಂಗ್ ಅವರ ಮುನಿಸು ಸದ್ಯಕ್ಕೆ ಶಮನಗೊಂಡಿರುವ ಬೆಳವಣಿಗೆಗಳು ಕಂಡು ಬಂದಿವೆ. 

ಆಗಸ್ಟ್ 4 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಆನಂದ್ ಅವರು, ಮೊದಲ ಬಾರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ಇದಾದ ಬಳಿಕ ಆಗಸ್ಟ್ 7 ರಂದು ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡುತ್ತಿದ್ದಂತೆಯೇ ಬೇಸರಗೊಂಡಿದ್ದರು. ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುವ ಬೆದರಿಕೆಯನ್ನೂ ನೀಡಿದ್ದರು. 

ಇದಷ್ಟೇ ಅಲ್ಲದೆ, ಹೊಸಪೇಟೆಯ ರಾಣಿಪೇಟೆಯಲ್ಲಿನ ಕಚೇರಿಯನ್ನು ದಿಢೀರ್ ಬಂದ್ ಮಾಡಿ, ನಾಮಫಲಕವನ್ನೂ ತೆರವುಗೊಳಿಸಿದ್ದರು. 

ಈ ಎಲ್ಲಾ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಹೈಕಮಾಂಡ್ ಆನಂದ್ ಸಿಂಗ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದು, ಇಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. 

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಆನಂದ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೂಡಲೇ ಹಂಚಿಕೆಯಾಗಿರುವ ಖಾತೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದ್ದಾರೆ. ಕೇಂದ್ರೀಯ ನಾಯಕತ್ವ ಕೂಡ ಬೇರೆ ಖಾತೆ ಕುರಿತ ಬೇಡಿಕೆಯನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೋಡಲಾಗುತ್ತದೆ, ಪ್ರಸ್ತುತ ಹಂಚಿಕೆಯಾಗಿರುವ ಖಾತೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್ ಅವರು, ಈ ಮೊದಲು ಮಾತನಾಡಿದ ವಿಚಾರವನ್ನೇ ಸಿಎಂ ಬಳಿ ಪ್ರಸ್ತಾಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಹಾಗೂ ಸಿಎಂ ಅವರನ್ನು ಭೇಟಿಯಾಗಿದ್ದೆ. ಇಬ್ಬರೂ ಸಹ ಮೊದಲು ಅಧಿಕಾರ ಸ್ವೀಕಾರ ಮಾಡು ಅಂತ ಹೇಳಿದ್ದರು. ಹೀಗಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸಿಎಂ ಅವರು ನನ್ನ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂದು ಹೇಳಿದ್ದರು. 

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ರಾಜೀನಾಮೆ ನೀಡಿದ್ದ ಶಾಸಕರ ಪೈಕಿ ಆನಂದ್ ಸಿಂಗ್ ಅವರು ಮೊದಲಿಗರಾಗಿದ್ದರು. 17 ಶಾಸಕರ ರಾಜೀನಾಮೆಯಿಂದಾಗಿ 2019ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವಂತಾಗಿತ್ತು. ಆನಂದ್ ಸಿಂಗ್ ರಾಜ್ಯದ ಶ್ರೀಮಂತ ರಾಜಕಾರಣಿಯಾಗಿದ್ದು, ಮೂರು ಪಕ್ಷಗಳಲ್ಲೂ ಸೇವೆ ಸಲ್ಲಿಸಿರುವ ಇವರು ಅತ್ಯಂತ ಪ್ರಭಾವಶಾಲಿ ನಾಯಕರೆಂದು ಪರಿಗಣಿಸಲಾಗಿದೆ. 2008-2013ರ ಬಿಜೆಪಿ ಸರ್ಕಾರದಲ್ಲಿ ಆನಂದ್ ಸಿಂಗ್ ಸಚಿವರಾಗಿದ್ದರು. 

ಈ ಎಲ್ಲಾ ಬೆಳವಣಿಗೆ ಕುರಿತು ರಾಜಕೀಯ ತಜ್ಞರು ಪ್ರತಿಕ್ರಿಯೆ ನೀಡಿ, ಆನಂದ್ ಸಿಂಗ್ ಅವರ ಪ್ರಭಾವವನ್ನು ಯಡಿಯೂರಪ್ಪ ಅವರ ಅಧಿಕಾರಾವಧಿಯಿಂದಲೇ ಅಳೆಯಬಹುದಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಆನಂದ್ ಸಿಂಗ್ ಅವರು ಬಯಸಿದ್ದ ಖಾತೆಯನ್ನೇ ನೀಡಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ನಂತರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾನ್ನಾಗಿಯೂ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಬಿಜೆಪಿ ಪಾಳಯದಲ್ಲಿ ವಿರೋಧಗಳ ನಡುವೆಯೂ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವಲ್ಲಿ ಸಫಲರಾಗಿದ್ದರು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com