ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ: ಮೌನ ಮುರಿದ ಜಿಟಿ ದೇವೇಗೌಡ

ಜೆಡಿಎಸ್‌ನಿಂದ ಮಾನಸಿಕವಾಗಿ ದೂರವೇ ಇದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೊನೆಗೂ ಮೌನ ಮುರಿದು ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ ಎಂದು ಹೇಳಿದ್ದಾರೆ.
ಜಿಟಿ ದೇವೇಗೌಡ
ಜಿಟಿ ದೇವೇಗೌಡ

ಮೈಸೂರು: ಜೆಡಿಎಸ್‌ನಿಂದ ಮಾನಸಿಕವಾಗಿ ದೂರವೇ ಇದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೊನೆಗೂ ಮೌನ ಮುರಿದು ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ ಎಂದು ಹೇಳಿದ್ದಾರೆ. 

ಇದರೊಂದಿಗೆ ಮಧು ಬಂಗಾರಪ್ಪ ಅವರ ಬಳಿಕ ಜೆಡಿಎಸ್'ನ ಮತ್ತೋರ್ವ ಪ್ರಮುಖ ನಾಯಕ ತೆನೆಯನ್ನು ಇಳಿಸಿದಂತಾಗಿದೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಟಿ ದೇವೇಗೌಡ ಅವರು, ಜೆಡಿಎಸ್‌ನಲ್ಲಿ ಸಾಕಷ್ಟು ಅವಮಾನ ಸಹಿಸಿಕೊಂಡಿದ್ದೇನೆ. ಇನ್ನು ಅಲ್ಲಿರಲು ಸಾಧ್ಯವೇ ಇಲ್ಲ. ಈ ಕಾರಣಕ್ಕೆ ಎಚ್‌ಡಿ ದೇವೇಗೌಡರಿಗೆ ಸಂದೇಶ ತಲುಪಿಸಿದ್ದೇನೆ. ನನ್ನನ್ನು ಕ್ಷಮಿಸಿ ಆಶೀರ್ವಾದ ಮಾಡಿ ಎಂದು ಕೇಳಿದ್ದೇನೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಹೇಳಿದರು. 

ಜೆಡಿಎಸ್​ನಲ್ಲಿ ಆದ ಅವಮಾನಗಳ ಬಗ್ಗೆ ಹೆಚ್​​.ಡಿ. ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಆಗ ಅವರು ನಿನ್ನನ್ನು ಮರಿದೇವೇಗೌಡ ಎಂದುಕೊಂಡಿದ್ದೇನೆ. ನೀನು ನನ್ನ ಜೊತೆಯೇ ಇರಬೇಕೆಂದು ಹೇಳಿದ್ದರು. ಅದಕ್ಕೆ ನಾನು ದಯವಿಟ್ಟು ಕ್ಷಮಿಸಿ ಎಂದು ದೇವೇಗೌಡರಿಗೆ ಹೇಳಿದ್ದೆ. ನನ್ನೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಾತಾಡಿದ್ದಾರೆ ಎಂದಿದ್ದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸೇರ್ಪಡೆ ಕುರಿತು ಸುಳಿವು ನೀಡಿದ್ದಾರೆ. 

ಇದೇ ವೇಳೆ ಕೆಆರ್ ನಗರ ಶಾಸಕ ಸಾರಾ ಮಹೇಶ್ ವಿರುದ್ಧ ಕಿಡಿಕಾರಿದ ಅವರು, ಎಚ್ ಡಿ ಕುಮಾರಸ್ವಾಮಿ ಅವರ ಆಜ್ಞೆಯಂತೆ ಮೈಸೂರಿನಲ್ಲಿ ಪ್ರಮುಖ ಜೆಡಿ (ಎಸ್) ನಾಯಕರಾಗಿ ಹೊರಹೊಮ್ಮಲು ಸಾರಾ ಮಹೇಶ್ ಬಯಸಿದ್ದಾರೆ . ಆದರೆ, ಸಾರಾ ಮಹೇಶ್, ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆಗಿದ್ದರೆ ಹೀರೋ. ಸಾರಾ ಮಹೇಶ್ ಮೈನಸ್ ಹೆಚ್'ಡಿಕೆ ಆದರೆ, ಸಾರಾ ಮಹೇಶ್ ಝೀರೋ ಎಂದಿದ್ದಾರೆ. 

ಪಕ್ಷಕ್ಕೆ ನಾನು ಪ್ರಾಮಾಣಿಕ ನಾಯಕನಾಗಿದ್ದೆ. ಆದರೆ, ಪಕ್ಷದ ಯಾವುದೇ ಕೆಲಸವಾಗಲೀ, ಸಭೆಗಳಿಗಾಗಲೀ ನನಗೆ ಆಹ್ವಾನ ನೀಡುತ್ತಿರಲಿಲ್ಲ. ಇದು ಉದ್ದೇಶಪೂರ್ವಕವಾಗಿ ನಾನೇ ಸಭೆಗಳಿಂದ ದೂರವಿರುತ್ತಿದ್ದೆ ಎಂದು ಬಿಂಬಿತವಾಗುತ್ತಿತ್ತು. ನನ್ನನ್ನು ಮೈಸೂರಿ ಜಿಲ್ಲೆ ಜಿಲ್ಲಾಧ್ಯಕ್ಷನನ್ನಾಗಿ ಮಾಡುವಂತೆ ನಿಯೋಗ ಪಕ್ಷಕ್ಕೆ ತಿಳಿಸಿತ್ತು. ಆದರೆ, ಕುಮಾರಸ್ವಾಮಿಯವರು ಮಹೇಶ್'ಗೆ ಬೆಂಬಲ ನೀಡಿದ್ದರು. ನಾನು ಯಾವುದೇ ಹುದ್ದೆ ಕೇಳದಿದ್ದರೂ ನನಗೆ ಅಪಮಾನ ಮಾಡಲಾಯಿತು ಎಂದು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದರು. 

ಬಳಿಕ ಮೈಸೂರು ಮಹಾನಗರ ಪಾಲಿಕೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕರಪತ್ರದಲ್ಲಿ ಹರೀಶ್‌ಗೌಡ ಫೋಟೋ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ನಮಗೆ ಆಪ್ತರು. ಹೀಗಾಗಿ ನನ್ನ ಪುತ್ರ ಹರೀಶ್ ಗೌಡ ಫೋಟೋ ಹಾಕಿದ್ದಾರೆ. ಆದರೆ ಹರೀಶ್ ಗೌಡ ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com