ಇಂದಿರಾ ಕ್ಯಾಂಟೀನ್ ಮರುನಾಮಕರಣ: ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಸಾಧ್ಯತೆ

ಇಂದಿರಾ ಕ್ಯಾಂಟೀನ್‌'ನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡುವ ವಿಚಾರ ಸಂಬಂಧ ಮುಂದಿನ ತಿಂಗಳು 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌'ನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡುವ ವಿಚಾರ ಸಂಬಂಧ ಮುಂದಿನ ತಿಂಗಳು 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇರ್ ರತ್ನ ಪ್ರಶಸ್ತಿ ಎಂದು ಪ್ರಧಾನಿ ಮೋದಿಯವರು ಮರುನಾಮಕರಣ ಮಾಡಿದ ಬಳಿಕ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ರಾಜ್ಯ ಸರ್ಕಾರ ಕೂಡ ಇಂದಿರಾ ಕ್ಯಾಂಟೀನ್'ನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. 

ತಮ್ಮ ಹೇಳಿಕೆ ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟರೂ ಕೂಡ ರವಿಯವರು ತಮ್ಮ ಹೇಳಿಕೆಯನ್ನೇ ಪುನರುಚ್ಛರಿಸಿದ್ದರು. 

2018ರ ಚುನಾವಣಾ ಪ್ರಣಾಳಿಕೆಯಲ್ಲಿ ಇಂದಿರಾ ಕ್ಯಾಂಟೀನ್ ಮರುನಾಮಕರಣ ಮಾಡುವುದಾಗಿ ಹೇಳಲಾಗಿತ್ತು. ಇದೀಗ ಆ ಸಮಯ ಬಂದಿದೆ ಎಂದು ಹೇಳಿದ್ದರು. ಅಲ್ಲದೆ, ಸೆಪ್ಟೆಂಬರ್ 13 ರಂದು ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದರು. 

ಈ ಕುರಿತು ಪಕ್ಷದ ಹಿರಿಯ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಅವರ ನಿರ್ದೇಶನದಂತೆಯೇ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸಲಾಗುತತ್ದೆ ಎಂದಿದ್ದರು. 

ಈ ನಡುವೆ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಈ ಕುರಿತ ಯಾವುದೇ ಪ್ರಸ್ತಾಪಗಳೂ ಸರ್ಕಾರದ ಮುಂದೆ ಇಲ್ಲ. ಆದರೆ, ಶಾಸಕರು ಅಧಿವೇಶನದಲ್ಲಿ ಈ ಕುರಿತ ವಿಚಾರವನ್ನು ಪ್ರಸ್ತಾಪಿಸಿದ್ದೇ ಆದರೆ, ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಚಾರ ಬಿಜೆಪಿ ನಾಯಕರಲ್ಲಿ ಉತ್ಸುಕತೆಯನ್ನು ಹೆಚ್ಚುವಂತೆ ಮಾಡಿದೆ. ಆದರೆ, ಈ ವಿಚಾರ ವಿವಾದಾತ್ಮಕವಾಗಿರುವುದರಿಂದ ಅಧಿವೇಶನದಲ್ಲಿ ಚರ್ಚೆ ನಡೆಯುವುದು ಅನುಮಾನ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಧಿವೇಶನ ಕೇವಲ 10 ದಿನಗಳು ಮಾತ್ರ ನಡೆಯಲಿದೆ. ಈ ವಿಚಾರ ಪ್ರಸ್ತಾಪದಿಂದ ಕಲಾಪ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೂ ಕೋರ್ ಕಮಿಟಿ ಸಭೆಯ ನಿರ್ಧಾರಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. 

2020ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅನ್ನಪೂರ್ಣೇಶ್ವರಿ ರಸೋಯಿಯನ್ನು ಇಂದಿರಾ ರಸೋಯಿ ಎಂದು ಮರುನಾಮಕರಣ ಮಾಡಿದ್ದು. ಅವರೇ ಮಾಡಿರುವಾಗ ಕರ್ನಾಟಕದಲ್ಲಿ ನಾವೇಕೆ ಮಾಡಬಾರದು. ಅನ್ನಪೂರ್ಣೇಶ್ವರಿ ದೇವರ ಹೆಸರು. ರಾಜಸ್ಥಾನದಲ್ಲಿನ ಸರ್ಕಾರ ಹೈಕಮಾಂಡ್ ಮನಗೆಲ್ಲಲು ಇಂತಹ ಪ್ರಯತ್ನವನ್ನು ಮಾಡಿತ್ತು ಎಂದು ಈ ಹಿಂದೆ ಸಿಟಿ ರವಿಯವರು ಹೇಳಿದ್ದರು. 

ಬಿಜೆಪಿ ಎಂಎಲ್'ಸಿ ಎನ್.ರವಿಕುಮಾರ್ ಅವರು ಮಾತನಾಡಿ, ಸರ್ಕಾರದ ಸಾಕಷ್ಟು ಯೋಜನೆಗಳು ಹಾಗೂ ಕಟ್ಟಡಗಳಿದ್ದು, ಹಲವು ಯೋಜನೆಗಳು ಹಳೆಯದಾಗಿವೆ. ಅವುಗಳ ಹೆಸರುಗಳನ್ನು ಬದಲಿಸಲು ಸಾಧ್ಯವಿಲ್ಲ. ಇಂದಿರಾ ಕ್ಯಾಂಟಿನ ಹೊಸ ಪರಿಕಲ್ಪನೆಯಾಗಿದ್ದು, ಅದನ್ನು ಮರುನಾಮಕರಣ ಮಾಡಬಹುದು. ಈ ಕುರಿತು ಅಧಿವೇಶನದ ಹೊರಗೂ ನಿರ್ಧಾರ ಕೈಗೊಳ್ಳಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com