ವಿಧಾನಮಂಡಲ ಅಧಿವೇಶನ: ಬಿಟ್ ಕಾಯಿನ್, ಪರ್ಸೆಂಟ್ ಲಂಚ ಆರೋಪ; ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು
ವಿಧಾನ ಮಂಡಲದ ಚಳಿಗಾಲ ಅಧಿವೇಶನ ಆರಂಭಕ್ಕೆ ಇನ್ನು ಬಾಕಿ ಇರುವುದು ಕೇವಲ 12 ದಿನ. ಈ ಹೊತ್ತಿನಲ್ಲಿ ಸದ್ಯ ಕೇಳಿಬರುತ್ತಿರುವ ಮೂರು ಮುಖ್ಯ ವಿಷಯಗಳಾದ ಬಿಟ್ ಕಾಯಿನ್ ಹಗರಣ, ಶೇಕಡಾ 40ರಷ್ಟು ಲಂಚ ಆರೋಪ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿರುವ ಅನಾಹುತ.
Published: 01st December 2021 07:59 AM | Last Updated: 01st December 2021 01:10 PM | A+A A-

ಸುವರ್ಣ ಸೌಧ
ಬೆಂಗಳೂರು: ವಿಧಾನ ಮಂಡಲದ ಚಳಿಗಾಲ ಅಧಿವೇಶನ ಆರಂಭಕ್ಕೆ ಇನ್ನು ಬಾಕಿ ಇರುವುದು ಕೇವಲ 12 ದಿನ. ಈ ಹೊತ್ತಿನಲ್ಲಿ ಸದ್ಯ ಕೇಳಿಬರುತ್ತಿರುವ ಮೂರು ಮುಖ್ಯ ವಿಷಯಗಳಾದ ಬಿಟ್ ಕಾಯಿನ್ ಹಗರಣ, ಶೇಕಡಾ 40ರಷ್ಟು ಲಂಚ ಆರೋಪ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿರುವ ಅನಾಹುತ, ನಷ್ಟಗಳ ಬಗ್ಗೆ ತಮ್ಮ ಮೂಲಗಳಿಂದ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಮಾಹಿತಿ ಕಲೆ ಹಾಕುವಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಿರತವಾಗಿವೆ.
ಬಿಟ್ ಕಾಯಿನ್ ಹಗರಣದಲ್ಲಿ ಹಲವು ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿವೆ. ಹ್ಯಾಕಿಂಗ್ ವಿಚಾರದಲ್ಲಿ ಹಲವು ಆಯಾಮಗಳು ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತು ಇನ್ನಷ್ಟು ವಿವರಗಳನ್ನು ಪಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಕಲಾಪ ಆರಂಭ ಹೊತ್ತಿನಲ್ಲಿ ಆದಷ್ಟು ಮಾಹಿತಿ ಕಲೆಹಾಕಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರ ಕಾಂಗ್ರೆಸ್ ನಾಯಕರು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
ಇನ್ನು ಬಿಡಿಎಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಆ ವಿಚಾರದಲ್ಲಿ ಕೂಡ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.ಯೋಜನೆಗೆ ಅನುಮೋದನೆ ಪಡೆಯಲು ಶೇಕಡಾ 40ರಷ್ಟು ಲಂಚ ನೀಡಬೇಕೆಂದು ಗುತ್ತಿಗೆದಾರರು ಹೇಳಿರುವುದು ಭಾರೀ ಸದ್ದು ಮಾಡುತ್ತಿದೆ. ಕಳೆದ ವಾರ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಅವರನ್ನು ಭೇಟಿ ಮಾಡಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.
ಗುತ್ತಿಗೆದಾರರು ಆರೋಪಿಸಿರುವಂತೆ ಸರ್ಕಾರದಿಂದ ಯೋಜನೆ ಪಡೆಯಲು ಲಂಚ ಪಡೆಯುತ್ತಾರೆ ಎಂಬ ಆರೋಪ ವನ್ನು ಸಾಬೀತುಪಡಿಸುವ ಜವಾಬ್ದಾರಿ ಮತ್ತು ಕೆಲಸ ಈಗ ವಿರೋಧ ಪಕ್ಷಗಳ ಮುಂದಿದೆ. ಲೋಕೋಪಯೋಗಿ ಇಲಾಖೆ,ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಮತ್ತು ಇತರ ಇಲಾಖೆಗಳಲ್ಲಿ ಶೇಕಡಾ 5ರಿಂದ 7ರಷ್ಟು ಗುತ್ತಿಗೆದಾರರು ತಕ್ಷಣ ಹಣ ನೀಡಬೇಕೆಂದು ಗುತ್ತಿಗೆದಾರರು ಆರೋಪಿಸಿದ್ದರು. ಅದನ್ನೀಗ ಸಾಬೀತುಪಿಸಬೇಕಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇನ್ನೆರಡು ದಿನಗಳೊಳಗೆ ತಮ್ಮ ಪಕ್ಷದ ಶಾಸಕರ ಸಭೆಯನ್ನು ಕರೆಯುವ ಸಾಧ್ಯತೆಯಿದ್ದು ಈ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ಏರ್ಪಡುವ ನಿರೀಕ್ಷೆಯಿದೆ. ಸದ್ಯ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸುಮ್ಮನಾಗಿದ್ದಾರೆ, ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ಮಾತ್ರ ಆರೋಪ ಮಾಡುತ್ತಿದ್ದಾರೆ, ಇನ್ನು ಅಧಿವೇಶನಕ್ಕೆ ಮುನ್ನ ಕುಮಾರಸ್ವಾಮಿಯವರು ಕೂಡ ಸ್ಫೋಟಗೊಳ್ಳುವ ನಿರೀಕ್ಷೆಯಿದೆ.
ಇನ್ನು ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಜಮೀನು ಜಲಾವೃತವಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಬೆಳೆಹಾನಿಯಾಗಿದೆ. ಮನೆಗಳು ಕುಸಿದಿವೆ. ಇನ್ನೂ ಸಾಕಷ್ಟು ನಷ್ಟವಾಗಿದೆ. ಸಂಕಷ್ಟಪೀಡಿತ ಜನರಿಗೆ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂಬುದನ್ನು ವಿರೋಧ ಪಕ್ಷಗಳು ಸದನದಲ್ಲಿ ತೋರಿಸಬೇಕಿದೆ.
ಇನ್ನು ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಬಾಕಿ ಇರುವುದು ಕೇವಲ 17 ತಿಂಗಳು. ಈ ಸಂದರ್ಭದಲ್ಲಿ ಸರ್ಕಾರದ ವೈಫಲ್ಯವನ್ನು ಜನತೆ ಮುಂದೆ ಎತ್ತಿಹಿಡಿಯಬೇಕೆಂಬ ಮನಸ್ಥಿತಿಯಲ್ಲಿ ವಿರೋಧ ಪಕ್ಷಗಳಿವೆ.