'ಈಶ್ವರಪ್ಪ ಒಂದೊಂದು ಸಾರಿ ಬಾಯಿತಪ್ಪಿ ಸತ್ಯ ಹೇಳಿಬಿಡ್ತಾರೆ, ಸಿಎಂ ಬದಲಾವಣೆ ಬಗ್ಗೆ ಹೇಳಿದ್ದು ನಿಜವೇ ಇರಬೇಕು: ಸಿದ್ದರಾಮಯ್ಯ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಇತ್ತೀಚೆಗೆ ನೀಡಿದ್ದ ಒಂದು ಹೇಳಿಕೆ. ಮರುಗೇಶ್ ನಿರಾಣಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದು ಹಲವು ರೀತಿಯಲ್ಲಿ ಈಗ ಚರ್ಚೆಯಾಗುತ್ತಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (K S Eshwarappa) ಇತ್ತೀಚೆಗೆ ನೀಡಿದ್ದ ಒಂದು ಹೇಳಿಕೆ. ಮರುಗೇಶ್ ನಿರಾಣಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದು ಹಲವು ರೀತಿಯಲ್ಲಿ ಈಗ ಚರ್ಚೆಯಾಗುತ್ತಿದೆ.

ಈ ಬಗ್ಗೆ ಇಂದು ಶಿವಮೊಗ್ಗದಲ್ಲಿ ಪತ್ರಕರ್ತರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಹಾಗಂತ ಈಶ್ವರಪ್ಪ ಹೇಳಿದ್ದಾರೆ, ಒಂದೊಂದು ಸಾರಿ ಈಶ್ವರಪ್ಪ ಬಾಯಿತಪ್ಪಿ ಸತ್ಯ ಹೇಳಿಬಿಡುತ್ತಾರೆ. ಈಶ್ವರಪ್ಪ ಬಿಜೆಪಿಯಲ್ಲಿ ಹಿರಿಯ ಸಚಿವರು, ಅವರು ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. ಅದರ ಅರ್ಥ ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraja Bommai) ಬಗ್ಗೆ ಅವರಿಗೆ ವಿಶ್ವಾಸವಿಲ್ಲ ಎಂದಲ್ಲವೇ ಎಂದರು.

ಈಶ್ವರಪ್ಪನವರನ್ನು ಬಸವರಾಜ ಬೊಮ್ಮಾಯಿಯವರೇ ಮಂತ್ರಿಯಾಗಿದ್ದು, ಅವರ ಬಗ್ಗೆಯೇ ವಿಶ್ವಾಸವಿಲ್ಲ ಎಂದ ಮೇಲೆ ಈಶ್ವರಪ್ಪಗೆ ಮಂತ್ರಿಯಾಗಿ ಉಳಿದುಕೊಳ್ಳಲು ಯಾವ ನೈತಿಕತೆಯಿದೆ, ಪ್ರಜಾಪ್ರಭುತ್ವದ ರೀತಿಯೇ ಅದು, ರಾಜೀನಾಮೆ ಕೊಟ್ಟು ಹೊರಬರಬೇಕು ಎಂದರು. 

ರಾಜ್ಯದಲ್ಲಿ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಹಿತಸಾಧನೆಯಲ್ಲಿ ತೊಡಗಿದ್ದಾರೆಯೇ ಹೊರತು ರಾಜ್ಯದ ಜನತೆ ಅಭಿವೃದ್ಧಿಗೆ ಏನೂ ಕೆಲಸ ಮಾಡಿಲ್ಲ, ರಸ್ತೆಗಳೆಲ್ಲ ಇತ್ತೀಚಿನ ಮಳೆಗೆ ಹಾಳಾಗಿ ಹೋಗಿದೆ. ಹಲವು ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಿದ್ದಾರೆ, ಉದ್ಘಾಟನೆ ಮಾಡಿದ್ದಾರೆ ಹೊರತು ಮುಂದೆ ಹೋಗಿಲ್ಲ, ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ 15 ಲಕ್ಷ ಮನೆಗಳನ್ನು 5 ವರ್ಷಗಳಲ್ಲಿ ಬಡವರಿಗೆ ಹಂಚಿಕೆ ಮಾಡಿದ್ದೆವು. ಬಿಜೆಪಿ ಸರ್ಕಾರದಲ್ಲಿ ಒಂದು ಮನೆ ಕೊಡಲು ಆಗಲಿಲ್ಲ, ಜನ ಶಾಪ ಹಾಕುತ್ತಾರೆ, ಮುಂದಿನ ಸಾರಿ ಜನ ಬಿಜೆಪಿ ಸೋಲಿಸುತ್ತಾರೆ, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗುತ್ತಿದೆ ಕಾಂಗ್ರೆಸ್ ಪರ ಅಲೆ ಆರಂಭವಾಗಿದೆ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ (Legislative Council election) 6 ಕಡೆ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲಾಗಿದ್ದು ಇನ್ನು 19 ಕಡೆ ಹಾಕಿಲ್ಲ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಜೆಡಿಎಸ್ ಬಿಜೆಪಿಗೆ ಬೆಂಬಲಿಸುತ್ತಾರೆ, ಕೆಲವು ಕಡೆ ಬಿಟ್ಟು ಸಾಮಾನ್ಯವಾಗಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸುತ್ತದೆ. ಈ ವಿಧಾನ ಪರಿಷತ್ ಚುನಾವಮೆ ಆದ ಬಳಿಕ ಯಡಿಯೂರಪ್ಪನವರಿಗೆ ಏನು ಎಂದು ಗೊತ್ತಾಗುತ್ತದೆ, ಅವರು ಇದುವರೆಗೆ ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆದವರಲ್ಲ. ಆಪರೇಷನ್ ಕಮಲ ಮಾಡಿ, ಹಿಂಭಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರು, ಭ್ರಷ್ಟಾಚಾರ ಹೆಚ್ಚಾದ ಕಾರಣ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದವಿಯಿಂದ ತೆಗೆದುಹಾಕಲಾಯಿತು ಎಂದು ಟೀಕಿಸಿದರು.

ಪೊಲೀಸ್ ಇಲಾಖೆಯಲ್ಲಿ ಲಂಚಗುಳಿತನ ತಾಂಡವವಾಡುತ್ತಿದೆ ಎಂದು ಹೋಂ ಮಿನಿಸ್ಟರೇ ಹೇಳಿದ್ದಾರೆ, ಪೊಲೀಸ್ ಇಲಾಖೆಯನ್ನು ಸರಿಪಡಿಸಲಾಗದಿದ್ದರೆ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com