ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಾಸಕರು, ಸಂಸದರು ಮತ್ತು ಸಚಿವರಿಗಿಲ್ಲ ಮತದಾನ ಭಾಗ್ಯ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾದ ಶಾಸಕರು ಮತ್ತು ಸಂಸದರಿಗೆ ಮತದಾನ ಮಾಡಲು ಅವಕಾಶವಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನ ಪರಿ,ತ್ ನ 25 ಸ್ಥಾನಗಳಿಗೆ ಕರ್ನಾಟಕದ 20 ಸ್ಥಳೀಯ ಸಂಸ್ಥೆಗಳಿಂದ ಮತದಾನ ನಡೆಯುತ್ತಿದೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾದ ಶಾಸಕರು ಮತ್ತು ಸಂಸದರಿಗೆ ಮತದಾನ ಮಾಡಲು ಅವಕಾಶವಿಲ್ಲ.

ಬಿಬಿಎಂಪಿ ಕೌನ್ಸಿಲ್‌ನ ಅವಧಿ ಸೆಪ್ಟೆಂಬರ್ 2020 ರಲ್ಲಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ, ಲೋಕಸಭಾ ಸದಸ್ಯರಾದ ಪಿಸಿ ಮೋಹನ್ (ಬೆಂಗಳೂರು ಸೆಂಟ್ರಲ್), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಮತ್ತು ಡಿವಿ ಸದಾನಂದ ಗೌಡ (ಬೆಂಗಳೂರು ಉತ್ತರ) ಅವರ ಮತದಾನ ಮಾಡುವಂತಿಲ್ಲ. ಇನ್ನೂ ಜೆಡಿಎಸ್ , ಬಿಜೆಪಿ ಮತ್ತು ಕಾಂಗ್ರೆಸ್ ನ 25 ಶಾಸಕರಿಗೂ ತಮ್ಮ ಹಕ್ಕು ಚಲಾಯಿಸಲು ಅವಕಾಶವಿಲ್ಲ, ಇವರ ಜೊತೆಗೆ ಸಚಿವರುಗಳಾದ ಆರ್. ಅಶೋಕ್, ವಿ ಸೋಮಣ್ಣ, ಮುನಿರತ್ನ, ಡಾ.ಸಿ ಅಶ್ವತ್ಥ ನಾರಾಯಣ, ಬೈರತಿ ಬಸವರಾಜ್ ಮತ್ತು ಗೋಪಾಲಯ್ಯ ಕೂಡ ಪರಿಷತ್ ಚುನಾವಣೆಗೆ ಮತದಾನ ಮಾಡುವಂತಿಲ್ಲ.

ಬಿಬಿಎಂಪಿಯಲ್ಲಿ ಚುನಾಯಿತ ಸಂಸ್ಥೆ ಇಲ್ಲದ ಕಾರಣ ಸ್ಥಳೀಯ ಸಂಸ್ಥೆಯೇ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಪದನಿಮಿತ್ತ ಸದಸ್ಯರು ಮತ ಚಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಸಿಇಒ ಮನೋಜಕುಮಾರ್ ಮೀನಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಆನೇಕಲ್ ಶಾಸಕ ಬಿ.ಶಿವಣ್ಣ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಕ್ಷೇತ್ರಗಳ ಪಟ್ಟಣ ಪುರಸಭೆಗಳ ಸದಸ್ಯರಾಗಿರುವ ಕಾರಣ ಅವರ ಹೆಸರು ಮಾತ್ರ ಪಟ್ಟಿಯಲ್ಲಿದ್ದು ಮತ ಚಲಾಯಿಸಬಹುದಾಗಿದೆ,

ಆದರೆ ಹುಬ್ಬಳ್ಳಿ-ಧಾರವಾಡದ ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಚುನಾವಣಾ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಹೊಂದಿದ್ದಾರೆ, ಹೀಗಾಗಿ ಅವರು ಮತದಾನ ಮಾಡಬಹುದಾಗಿದೆ. ಬೆಳಗಾವಿ ಮತ್ತು ಕಲಬುರಗಿಯಿಂದ ಚುನಾಯಿತರಾದ ಪ್ರತಿನಿಧಿಗಳಿಗೂ ಇದು ಅನ್ವಯಿಸುತ್ತದೆ.

198 ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆಗೆ ಆಕ್ಷೇಪ ಎತ್ತುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ, ಈ ಹಿಂದೆ ಹಲವು ಬಾರಿ ಬಿಬಿಎಂಪಿಗೆ ಚುನಾವಣೆ ಮುಂದೂಡಲ್ಪಟ್ಟಿದ್ದರಿಂದ ಶುಕ್ರವಾರ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲನ ಶಾಸಕರು ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com