ಅಂಬೇಡ್ಕರ್ ಫೋಟೋ ವಿಚಾರ: ವಿಧಾನಸಭೆಯಲ್ಲಿ ಗರಂ ಆದ ಸ್ಪೀಕರ್ ಕಾಗೇರಿ!

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಇಂದು ನಡೆಯಿತು. ನಿಯಮಾವಳಿಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನದ ನಂತರ ಮಾತನಾಡಬೇಕಿತ್ತು. 
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಳಗಾವಿ: ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಇಂದು ನಡೆಯಿತು. ನಿಯಮಾವಳಿಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನದ ನಂತರ ಮಾತನಾಡಬೇಕಿತ್ತು. 

ಆದರೆ, ಶಾಸಕ ಅನ್ನದಾನಿ ಅವರು, ಸಭೆಯಲ್ಲಿ ಎದ್ದು ನಿಂತು ಅಂಬೇಡ್ಕರ್ ಅವರ ವಿಚಾರ ಮಾತನಾಡಲು ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಾಗೇರಿ ಅವರು, ನೀವು ಯಾವಾಗ ವಿಷಯವನ್ನು ಪ್ರಸ್ತಾಪಿಸಬೇಕೆಂಬುದನ್ನು ಸ್ಪೀಕರ್ ಆಗಿ ನಾನು ನಿರ್ಧಾರ ಮಾಡುತ್ತೇನೆ. ನೀವು ಯಾವಾಗ ಬೇಕಾದ್ರೆ ಎದ್ದು ನಿಂತು ಪ್ರಶ್ನೆ ಕೇಳಲು ಪ್ರಾರಂಭಿಸಿದರೆ ಸಭೆ ನಿಯಮಾವಳಿ ಪ್ರಕಾರ ನಡೆಯಬೇಕೋ.. ಇಲ್ಲೋ ಮನಸೋ ಇಚ್ಛೆ ನಡೆಯಬೇಕು ಅಂತಾ ಪ್ರಶ್ನೆ ಮಾಡಿದರು.

ನೀವು ಹೇಳಿದ ಹಾಗೇ ನಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಬೆಳೆ ಹಾನಿ ಬಗ್ಗೆ ಈಗ ಮಾತನಾಡುತ್ತಾರೆ. ನೀವು ಕುಳಿತುಕೊಳ್ಳಿ ಎಂದು ಅನ್ನದಾನಿ ಅವರನ್ನು ತಡೆಯಲು ಯತ್ನಿಸಿದರು. ಆದರೆ ಶಾಸಕ ಅನ್ನದಾನಿ ಅವರು ಕುಳಿತುಕೊಳ್ಳಲೇ ಇಲ್ಲ. ನೀವು ಯಾವ ವಿಷಯವನ್ನು ಪ್ರಸ್ತಾಪಿಸಬೇಕು ಎನ್ನುತ್ತಿದ್ದಿರೋ ಅದಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಮುಂಚಿತವಾಗಿ ಅವಕಾಶ ಪಡೆದು ಪ್ರಸ್ತಾಪಿಸಬೇಕಾಗುತ್ತದೆ.

ಸಭಾಧ್ಯಕ್ಷರು ಶಾಂತಿ, ಸಮಾಧಾನದಿಂದ ಹೇಳಿದರೂ ಶಾಸಕರು ಸುಮ್ಮನಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಸಭಾಧ್ಯಕ್ಷರು ಸಾವಿರ ಸಲ ಹೇಳಿದ್ದೇನೆ. ನಾನು ಅಶಿಸ್ತು ಸಹಿಸಲ್ಲ ಎಂದರು. ಒಂದು ವೇಳೆ ಅಶಿಸ್ತು ಮುಂದುವರಿಸಿದರೆ ಒಂದು ಹೆಜ್ಜೆ ಮುಂದಕ್ಕೆ ಹೋಗಬೇಕಾಗುತ್ತದೆ. ಅನ್ನದಾನಿ ಅವರೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದೀರಿ. ಸದನಕ್ಕೆ ಘನತೆ, ಗೌರವ ಇದೆ ಅನ್ನೋದು ಗೊತ್ತಿಲ್ವೇ ಎಂದು ಸಭಾಧ್ಯಕ್ಷರು ಪ್ರಶ್ನೆ ಮಾಡಿದರು.

ನಿಮ್ಮ ಮುಂದೆ ಚಿಕ್ಕವರಾಗಿ ಕೈ ಮುಗಿದು ಹೇಳುತ್ತೇನೆ. ಯಾವುದೇ ವಿಷಯ ಪ್ರಸ್ತಾಪಿಸಬೇಕಾದರೆ ನೀವು ನಮ್ಮೊಂದಿಗೆ ಚರ್ಚಿಸಿ ಪ್ರಸ್ತಾಪಿಸಬೇಕಾಗುತ್ತದೆ. ನೀವು ಯಾವ ವಿಷಯವನ್ನು ಪ್ರಸ್ತಾಪಿಬೇಕೆಂದಿದ್ದರೊ ಆ ವಿಚಾರದ ಬಗ್ಗೆ ನಾವು ಅಷ್ಟೇ ಗಂಭೀರವಾಗಿದ್ದೇವೆ. ನಿಮ್ಮ ವಿಚಾರಕ್ಕೆ ಸದನ ಬದ್ಧವಾಗಿದೆ ಎಂದು ಸಭಾಧ್ಯಕ್ಷರು ಹೇಳಿದರು. ಅಂಬೇಡ್ಕರ್ ಫೋಟೋ ಹಾಕಲು ಯಾವುದೇ ವಿವಾದ ಇಲ್ಲ. ಉಳಿದ ಯಾವ ಫೋಟೋಗಳನ್ನು ಹಾಕಬೇಕೆಂಬುದರ ಮಾಹಿತಿ ಕಲೆ ಹಾಕಲಾಗುತ್ತದೆ. ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಂಗಳೂರಿನಂತೆ ಹಾಕಲಾಗುವುದು ಎಂದು ಸಭಾಧ್ಯಕ್ಷ ಕಾಗೇರಿ ಹೇಳಿದಾಗ ಶಾಸಕ ಅನ್ನದಾನಿ ಸುಮ್ಮನಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com