ಕುಕನೂರಿನಲ್ಲಿ ‘ಕೈ’ಗೆ ಅಧಿಕಾರದ ಚುಕ್ಕಾಣಿ; ಬಾಗಲಕೋಟೆಯಲ್ಲಿ ಪತಿ, ಪತ್ನಿ ಗೆಲುವು, ಹೊಸಪೇಟೆಯಲ್ಲಿ ಸಹೋದರಿಯರ ವಿಜಯಪತಾಕೆ

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ನಿರ್ಣಾಯಕ ಹಂತ ತಲುಪಿರುವಂತೆಯೇ ಅತ್ತ ಕೊಪ್ಪಳದ ಕುಕನೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ನಿರ್ಣಾಯಕ ಹಂತ ತಲುಪಿರುವಂತೆಯೇ ಅತ್ತ ಕೊಪ್ಪಳದ ಕುಕನೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯಿತಿಯ ಒಟ್ಟು 19 ವಾರ್ಡ್ ಗಳ ಪೈಕಿ ಕಾಂಗ್ರೆಸ್ 10 ವಾರ್ಡ್ ಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಉಳಿದಂತೆ ಬಿಜೆಪಿ 9 ವಾರ್ಡ್ ಗಳಲ್ಲಿ ಜಯ ದಾಖಲಿಸಿದೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಗದಗ-ಬೆಟಗೇರಿ ನಗರಸಭೆ: ಕಾಂಗ್ರೆಸ್, ಬಿಜೆಪಿ ಯುವ ಜಿಲ್ಲಾಧ್ಯಕ್ಷರಿಗೆ ಸೋಲು
ಅಂತೆಯೇ ಇತ್ತ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷರೇ ಪರಾಭವಗೊಂಡಿದ್ದು, ಯುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಹಿರೇಮನಿ ಪಾಟೀಲ್‌ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಕರಿಸೋಮನಗೌಡರ ವಿರುದ್ಧ ಸೋತಿದ್ದಾರೆ. ಇನ್ನು ಮತ್ತೊಂದು ವಾರ್ಡ್‌ನಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಮಂದಾಳಿ ವಿರುದ್ಧ ಬಿಜೆಪಿ ಅಭ್ಯರ್ಥಿ ವಿನಾಯಕ ಮಾನವಿ ಗೆಲುವು ಸಾಧಿಸಿದ್ದಾರೆ. 

ಪತಿ, ಪತ್ನಿ ಗೆಲುವು
ಬಾಗಲಕೋಟೆಯಲ್ಲಿ ಪತಿ-ಪತ್ನಿ ಇಬ್ಬರೂ ಕಮಾಲ್ ಮಾಡಿದ್ದು, ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ-ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ ಏಳರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದರೆ, ವಾರ್ಡ್ ನಂಬರ್ 15ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪತ್ನಿ ನೇತ್ರಾವತಿ ನಿಂಬಲಗುಂದಿ ಕೂಡ ಜಯ ಗಳಿಸಿದ್ದಾರೆ. 

ಸಹೋದರಿಯರ ವಿಜಯಪತಾಕೆ
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಸಹೋದರಿಯರು ವಿಜಯಪತಾಕೆ ಹಾರಿಸಿದ್ದು, ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸಹೋದರಿಯರಿಗೆ ಗೆಲುವು ಸಿಕ್ಕಿದೆ. 33ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಕ್ಕ ಪರಗಂಟಿ ಲಕ್ಷ್ಮಿ, 34ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com