
ಸಂಗ್ರಹ ಚಿತ್ರ
ಬೆಂಗಳೂರು: ಸರ್ಕಾರದ ವಸತಿ ಯೋಜನೆಯಡಿ ಅಕ್ರಮ ನಡೆದಿದೆ ಎಂಬ ವಿಚಾರಕ್ಕೆ ಸ್ಥಳೀಯ ಶಾಸಕ ಕಾಂಗ್ರೆಸ್'ನ ಈಶ್ವರ್ ಖಂಡ್ರೆ ಹಾಗೂ ವಸತಿ ಸಚಿವ ವಿ.ಸೋಮಣ್ಣ ನಡುವೆ ಜಟಾಪಟಿ ನಡೆಯಿತು.
ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಇಬ್ಬರು ನಾಯಕರ ನಡುವೆ ತೀವ್ರ ವಾಗ್ವಾದ ನಡೆದು ಇಬ್ಬರೂ ತಮ್ಮ ಹೇಳಿಕೆ ಸುಳ್ಳಾಗಿದ್ದರೆ ನೇಣು ಹಾಕಿಕಕೊಳ್ಳುವ ಘೋಷಣೆ ಮಾಡುವ ಮಟ್ಟಕ್ಕೆ ಮುಟ್ಟಿತ್ತು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರದ ಮೇಲಿನ ಚರ್ಚೆ ವೇಳೆ, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆ ಅರ್ಧಕ್ಕೆ ನಿಂತಿದೆ. ಯೋಜನೆಗೆ ಅರ್ಹರಾದ ಫಲಾನುಭವಿಗಳಿಗೆ ಬೇರೆ ಬೇರೆ ಕಾರಣಕ್ಕೆ ಹಣ ಕೊಡಬಾರದೆಂದು ನಿಲ್ಲಿಸಲಾಗಿದೆ. ಜನರ ಶಾಪ ನಿಮಗೆ ತಟ್ಟುವುದಿಲ್ಲವೇ ಎಂದು ವಸತಿ ಸಚಿವರನ್ನು ಉದ್ದೇಶಿಸಿ ಖಂಡ್ರೆ ಹೇಳಿದರು.
ಇದರಿಂದ ತೀವ್ರವಾಗಿ ಸಿಟ್ಟಾದ ಸೋಮಣ್ಣ ಅವರು, ಬೀದರ್'ಗೆ ಖುದ್ದು ನಾನೇ ಭೇಟಿ ನೀಡಿದ್ದೆ. ಭಾಲ್ಕಿ ಕ್ಷೇತ್ರದಲ್ಲಿ ಅನರ್ಹರಿಗೆ ವಸತಿ ಹಂಚಿಕೆ ಮಾಡಿ ಅವ್ಯವಹಾರ ಮಾಡಲಾಗಿದೆ. ಅಧಿಕಾರಿಗಳು ನೀಡಬೇಕಾದ ಮಂಜೂರು ಆದೇಶವನ್ನು ಸ್ಥಳೀಯ ಶಾಸಕರೇ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ 6 ಮಂದಿ ಪಿಡಿಓಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖಂಡ್ರೆ, ವೈಯಕ್ತಿಕ ದುರುದ್ದೇಶದಿಂದ ವಿರೋಧಿಗಳಿಂದ ದೂರು ಕೊಡಿಸಿ, ಭ್ರಷ್ಟ ಅಧಿಕಾರಿಯನ್ನಿಟ್ಟುಕೊಂಡು ಈ ತನಿಖೆ ನಡೆಸಲಾಗುತ್ತಿದೆ. ವಸತಿ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳು ಮಧ್ಯವರ್ತಿಗಳಿಗೆ ಹಣ ನೀಡಬಾರದೆಂದು ಹೊರಡಿಸಿರುವ ಪ್ರಕಟಣೆಯನ್ನು ಆದೇಶ ಎಂದು ತಪ್ಪು ವರದಿ ನೀಡಲಾಗಿದೆ. ತನಿಖೆ ನೆಪದಲ್ಲಿ ಸುಳ್ಳು ವರದಿ ನೀಡಿ ಮನೆಗಳ ನಿರ್ಮಾಣಕ್ಕೆ ಹಣ ತಡೆ ಹಿಡಿದಿರುವುದರಿಂದ ಕೆಲ ಫಲಾನುಭವಿಗಳಿಗೆ ನೀಡಿರುವ ಹಣ ವಾಪಸ್ ಪಡೆಯಲು ಸೂಚಿಸಲಾಗಿದೆ. ಇದು ಅನ್ಯಾಯದ ಪರಮಾವಧಿ. ನನ್ನ ವಿರುದ್ಧ ಆರೋಪಗಳ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಲಿ. ಆರೋಪ ಸಾಬೀತಾದರೆ, ರಾಜೀನಾಮೆ ನೀಡಲು ಸಿದ್ಧ. ಬೇಕಿದ್ದರೆ ಗಲ್ಲಿಗೇರಿಸಲಿ ಎಂದು ಹೇಳಿದರು.
ಅಲ್ಲದೆ, ಈ ವೇಳೆ ವಸತಿ ಇಲಾಖೆಯಲ್ಲಿ ಬೆಂಗಳೂರಿನಲ್ಲಿ 1 ಲಕ್ಷ ಮನೆ ಯೋಜನೆಯಲ್ಲಿ ಗುತ್ತಿಗೆದಾರರಿಗೆ ನೂರಾರು ಕೋಟಿ ರುಪಾಯಿ ಮುಂಗಡ ಹಣ ಪಾವತಿಗೆ ಸರ್ಕಾರದ ಬಳಿ ಹಣ ಇದೆ. ಅದು ಹೇಗೆ ಸಾಧ್ಯ? ಗುತ್ತಿಗೆದಾರರಿಗೆ ಈ ವಿಶೇಷ ಅನುಕೂಲ ಮಾಡಿಕೊಡಲು ಹಣವಿದೆ. ಫಲಾನುಭವಿಗಳಿಗೆ ನೀಡಲು ಹಣ ಇಲ್ಲವೇ? ಇಲ್ಲಿ ಅಕ್ರಮ ನಡೆದಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಕೆರಳಿದ ಸೋಮಣ್ಣ ಅವರು, ಗುತ್ತಿಗೆದಾರರಿಗೆ ಕಾನೂನಾತ್ಮಕವಾಗಿಯೇ ಶೇ.5ರಷ್ಟು ಮುಂಗಡ ಮಾತ್ರ ನೀಡಲಾಗಿದೆ. ಸುಳ್ಳು ಆಪಾದನೆ, ಅಪಪ್ರಚಾರ ಸರಿಯಲ್ಲ. ರಾಜಕಾರಣ ನನ್ನ ಉದ್ಯೋಗವಲ್ಲ. ದೋಚುವವನು ನಾನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.