ಬಿಎಂಆರ್ ಸಿಎಲ್ ನಲ್ಲಿ ಅಸಮಾನತೆ, ಶೃಂಗೇರಿ ಗ್ಯಾಂಗ್ ರೇಪ್ ಪ್ರಕರಣ ಕುರಿತು ಪರಿಷತ್ ನಲ್ಲಿ ಕೋಲಹಲ!
ಬಿಎಂಆರ್ಸಿಎಲ್ನಲ್ಲಿ ಕನ್ನಡಿಗ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದ್ದು ಮತ್ತು ನೇಮಕ ಪ್ರಕ್ರಿಯೆಯಲ್ಲಿ ಅಸಮಾನತೆ ನಡೆಯುತ್ತಿದೆ ಎಂದು ಎಂಎಲ್ ಸಿ ಕಾಂತರಾಜು ವಿಧಾನ ಪರಿಷತ್ತಿನಲ್ಲಿ ಆರೋಪಿಸಿದ್ದಾರೆ.
Published: 05th February 2021 08:51 AM | Last Updated: 05th February 2021 12:39 PM | A+A A-

ವಿಧಾನ ಪರಿಷತ್
ಬೆಂಗಳೂರು: ಬಿಎಂಆರ್ಸಿಎಲ್ನಲ್ಲಿ ಕನ್ನಡಿಗ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದ್ದು ಮತ್ತು ನೇಮಕ ಪ್ರಕ್ರಿಯೆಯಲ್ಲಿ ಅಸಮಾನತೆ ನಡೆಯುತ್ತಿದೆ ಎಂದು ಎಂಎಲ್ ಸಿ ಕಾಂತರಾಜು ವಿಧಾನ ಪರಿಷತ್ತಿನಲ್ಲಿ ಆರೋಪಿಸಿದ್ದಾರೆ.
ಬಿಎಂಆರ್ ಸಿ ಎಲ್ ನ ಪ್ರಮುಖ 22 ಹುದ್ದೆಗಳಲ್ಲಿ ಕೇವಲ 1 ಹುದ್ದೆ ಮಾತ್ರ ಕನ್ನಡಿಗರಿಗೆ ನೀಡಿದ್ದು, ಉಳಿದವು ಬೇರೆ ರಾಜ್ಯಗಳ ಜನರಿಗೆ ನೀಡಲಾಗಿದೆ. ವಿಶೇಷವಾಗಿ ತಮಿಳುನಾಡಿನವರಿಗೆ ನೀಡಿದ್ದಾರೆ ಎಂದು ದೂರಿದ್ದಾರೆ.
ಯಾವುದೇ ಕಾರಣ ನೀಡದೇ ಅನೇಕ ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ, ಟೋಕನ್ ನೀಡುವ ಸಿಬ್ಬಂದಿ ಕೂಡ ಹೊರಗಿನ ರಾಜ್ಯದವರಾಗಿದ್ದಾರೆ. ಇದರಿಂದ ಇಂಗ್ಲೀಷ್ ಮತ್ತು ಹಿಂದಿ ತಿಳಿಯದ ಕನ್ನಡಿಗರಿಗೆ ಸಮಸ್ಯೆಯಾಗುತ್ತಿದೆ ಎಂದು ಕಾಂತರಾಜು ಆರೋಪಿಸಿದ್ದಾರೆ. ಸರ್ಕಾರ ಕೂಡಲೇ ನಿಯಮ ಜಾರಿಗೆ ತಂದು ಶೇ. 60 ರಷ್ಟು ಮಂದಿ ಕನ್ನಡಿಗರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸೂಕ್ತ ಪರೀಕ್ಷೆಯ ಮೂಲಕ ಶಾಶ್ವತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಮತ್ತು ಇದು ಯೋಜನೆಯಾಗಿರುವುದರಿಂದ ಅನೇಕ ಕಾರ್ಮಿಕರನ್ನು ಶಾಶ್ವತವಾಗಿ ನೇಮಿಸಿಕೊಳ್ಳಲು ಅವಕಾಶವಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು . "ಈ ವಿಷಯವನ್ನು ಪರಿಶೀಲಿಸುವಂತೆ ನಾನು ಬಿಎಂಆರ್ಸಿಎಲ್ ಎಂಡಿಗೆ ಸೂಚಿಸುತ್ತೇನೆ" ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಫಿಯಾದ ಹಿಡಿತದಲ್ಲಿದೆ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿ ಪ್ರಸಾದ್ ಸದನದಲ್ಲಿ ವಿಷಯ ಪ್ರಸ್ತಾಪಿಸಿದರು, ಇದಕ್ಕೆ ಉತ್ತರ ನೀಡಿದ ಸಚಿವ ಬಸವರಾಜ್ ಬೊಮ್ಮಾಯಿ ಮಾಫಿಯಾಗೆ ಕಡಿವಾಣ ಹಾಕಲು ಘನತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ವಾರ್ಡ್ ವಾರು ಟೆಂಡರ್ ಕರೆದಿದೆ ಎಂದು ಸಮಜಾಯಿಷಿ ನೀಡಿದರು.
ಶೃಂಗೇರಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೂ ಪರಿಷತ್ ನಲ್ಲಿ ಚರ್ಚೆಯಾಯಿತು. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯದ ಚರ್ಚೆಯ ಸಂದರ್ಭದಲ್ಲಿಕಾಂಗ್ರೆಸ್ ಮುಖ್ಯ ಸಚೇತಕ ಎಂ ನಾರಾಯಣಸ್ವಾಮಿ ಈ ವಿಷಯವನ್ನು ಎತ್ತಿದರು ಮತ್ತು ಪ್ರಧಾನ ಆರೋಪಿ ಸಂಘ ಪರಿವಾರ್ ಸದಸ್ಯರಾಗಿದ್ದರೆ, ಮತ್ತೊಬ್ಬ ಆರೋಪಿ ಬಿಜೆಪಿ ಯುವ ಮೋರ್ಚಾ ಸದಸ್ಯ ಎಂದು ಹೇಳಿದರು . ಇದು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ವಾದಕ್ಕೆ ಕಾರಣವಾಯಿತು. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡುವುದಾಗಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.