ತಾಲೂಕು ಪಂಚಾಯಿತಿ ರದ್ದು: ವಿಧಾನಸಭೆಯಲ್ಲಿ ಗಂಭೀರ ಚರ್ಚೆ, ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲು ಸರ್ಕಾರ ನಿರ್ಧಾರ
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗುವ ನಡುವಲ್ಲೇ ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ.
Published: 05th February 2021 09:06 AM | Last Updated: 05th February 2021 11:55 AM | A+A A-

ಈಶ್ವರಪ್ಪ
ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗುವ ನಡುವಲ್ಲೇ ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ.
ಗುರುವಾರ ಶೂನ್ಯ ವೇಳೆ ಬಿಜೆಪಿ ಸದಸ್ಯ ಕುಮಾರ್ ಬಂಗಾರಪ್ಪ ವಿಚಾರ ಪ್ರಸ್ತಾಪಿಸಿ, ತಾಲೂಕು ಪಂಚಾಯಿತಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸಿಗುವ ಮಹತ್ವ ತಾಲೂಕು ಪಂಚಾಯಿತಿಗೆ ಸಿಗುತ್ತಿಲ್ಲ. ಹೀಗಾಗಿ ಮೂರು ಹಂತದ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಕ್ಕೆ ಇಳಿಸುವುದು ಸೂಕ್ತ ಎಂದು ಹೇಳಿದರು.
ಇದಕ್ಕೆ ಪಕ್ಷಾತೀತವಾಗಿ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿವೆ. ಈ ಬಗ್ಗೆ ನಾವೇ ನಿರ್ಧರಿಸಲು ಸಾಧ್ಯವಿಲ್ಲ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲಾಗುವುದು ಎಂದು ತಿಳಿಸಿದರು.