ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ: ಕುಮಾರಸ್ವಾಮಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಣ ಸಂಗ್ರಹ ಮಾಡುತ್ತಿರುವವರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ....

Published: 17th February 2021 04:16 PM  |   Last Updated: 17th February 2021 04:19 PM   |  A+A-


HDKumaraswamy1

ಎಚ್ ಡಿ ಕುಮಾರಸ್ವಾಮಿ

Posted By : Lingaraj Badiger
Source : UNI

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಣ ಸಂಗ್ರಹ ಮಾಡುತ್ತಿರುವವರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ಬೀದಿಯಲ್ಲಿ ಹೋಗುವ ಪುಂಡು ಪೋಕರಿಗಳೆಲ್ಲಾ ಹಣ ಮಸೂಲಿಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹದಲ್ಲಿ ಪಾರದರ್ಶಕತೆ ವಿಧಾನ ಅನುಸರಿಸುತ್ತಿಲ್ಲ. ಮಂದಿರ ನಿರ್ಮಿಸಲು ನಾನು ಹಣ ಕೊಡುವುದಿಲ್ಲ ಎಂದು ಹೇಳಿಲ್ಲ. ಸೂಕ್ತ ಮತ್ತು ಅರ್ಹ ವ್ಯಕ್ತಿಗಳು ಬಂದು ಹಣ ಕೇಳಿದರೆ ಒಂದಲ್ಲ, ಎರಡು ಬಾರಿ ದೇಣಿಗೆ ಕೊಡುತ್ತೇನೆ. ಆದರೆ ಎಲ್ಲೆಂದರಲ್ಲಿ ವಸೂಲಿ ಮಾಡುವುದು ನಿಲ್ಲಬೇಕು ಎಂದು ಒತ್ತಾಯಿಸಿದರು. 

ಆದರೆ ನಾನಾಗಲಿ ನನ್ನ ಕುಟುಂಬವಾಗಲೀ ಧರ್ಮವನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಧರ್ಮವನ್ನು ಬಳಸಿ ರಾಜಕಾರಣವನ್ನೂ ಮಾಡುತ್ತಿಲ್ಲ. ಮಾಡುವುದೂ ಇಲ್ಲ. ದೇಣಿಗೆ ಹೆಸರಲ್ಲಿ ಹಣ ದುರ್ಬಳಕೆಯಾಗುತ್ತಿದೆ. ಇದರ ಲೆಕ್ಕ ಇಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರ ಹೇಳಿಕೆಗೆ ವಿಶ್ವಹಿಂದು ಪರಿಷತ್, ಸಂಘಪರಿವಾರ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಆಕ್ರೋಶವ್ಯಕ್ತಪಡಿಸಿದ್ದು, ಕುಮಾರಸ್ವಾಮಿ ಪ್ರಚಾರಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು. 

ಇಂದು ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ. ನನಗೇ ಬೆದರಿಕೆ ಹಾಕುತ್ತಿದ್ದಾರೆ ಎಂದ ಮೇಲೆ ಇನ್ನು ಸಾಮಾನ್ಯರ ಜನರ ಪಾಡೇನು? ಎಂದು ಪ್ರಶ್ನಿಸಿದರು.

ದೇಶದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕು, ನೆಮ್ಮದಿಯನ್ನು ಬಿಜೆಪಿ ಸರ್ಕಾರ ಕಸಿದುಕೊಂಡು ದೇಶವನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತಿದೆ. ನನ್ನ ಹೇಳಿಕೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಕೊಟ್ಟ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು. 

ದೇಣಿಗೆ ಕೊಟ್ಟವರ ಮನೆಗಳಿಗೆ ಸ್ಟಿಕ್ಕರ್ ಹಾಕುವುದಾಗಿ ಒಪ್ಪಿಕೊಂಡಿದ್ದಾರೆ. ಶ್ರೀರಾಮ‌ಮಂದಿರಕ್ಕೆ ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ. ರಾಮನ ಹೆಸರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಂಡು ಪುಂಡಪೋಕರಿಗಳು ಹಣ ಸಂಗ್ರಹ ಮಾಡುತ್ತಿದ್ದಾರೆ. ವಿಶ್ವಹಿಂದು ಪರಿಷತ್ ಇದಕ್ಕೆ ಅವಕಾಶ ಕೊಟ್ಟಿದೆ. ನೆರೆ ಪ್ರವಾಹದ ವೇಳೆಯೂ ಕೆಲವರು ಹಣ ಸಂಗ್ರಹಿಸಿ ಸಂತ್ರಸ್ಥರಿಗಾಗಿ ಹಣ ವಿನಿಯೋಗಿಸದೆ ದುರ್ಬಳಕೆ ಮಾಡಿಕೊಂಡರು. ಅದೇ ರೀತಿ ಈಗಲೂ ಆದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇವೇಗೌಡರು ಕುಟುಂಬ ರಾಜಕಾರಣ ಮಾಡಿದ್ದಾರೆಯೇ ಹೊರತು ಚಿಲ್ಲರೆ ರಾಜಕಾರಣ ಮಾಡಿದವರಲ್ಲ. ಇಂತಹ ಸಂದರ್ಭದಲ್ಲಿ ಯಾರೂ ಧಾರ್ಮಿಕ ರಾಜಕಾರಣ ಮಾಡಬಾರದು ಎಂದರು.

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಲ್ಲೇಶ್ವರಂನಲ್ಲಿ ಜಾಕ್ ಎತ್ತಿ ಕೋಟ್ಯಾಂತರ ರೂ. ಹೊಡೆದವರು ಯಾರು?. ಮೊದಲು ಅದನ್ನು ಒಪ್ಪಿಕೊಳ್ಳಬೇಕು.
ನಾಜಿ ಸಂಸ್ಕೃತಿ ಬಗ್ಗೆ ನಾನು ಮಾತನಾಡಿಲ್ಲ. ಆರ್ ಎಸ್ ಎಸ್, ನಾಜಿ ಬಗ್ಗೆ ಇತಿಹಾಸತಜ್ಞರು ಉಲ್ಲೇಖಿಸಿರುವುದನ್ನು ನಾನು ವಿವರಿಸಿದ್ದೇನೆ. ದೇಶಕ್ಕೆ ಆರ್.ಎಸ್.ಎಸ್.ನ ಕೊಡುಗೆಯೇನು? ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.

ಬಡವರು ಗ್ಯಾಸ್ ಖರೀದಿಸುತ್ತಿಲ್ಲ. ಕೋವಿಡ್ ನಿಂದ ಜನ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ನಾನು ಲಘುವಾಗಿ ಮಾತನಾಡುವವನಲ್ಲ. ಸಮಸ್ಯೆ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆಯೇ ಹೊರತು ರಾಮನ ವಿರುದ್ಧವಾಗಿ ಮಾತನಾಡಿಲ್ಲ. ಧರ್ಮದ ಹೆಸರಿನಲ್ಲಿ ಲೂಟಿ ಸಲ್ಲದು ಎಂದರು.

ಸಾಮಾಜಿಕ ಕಾರ್ಯಕರ್ತೆ, ಬೆಂಗಳೂರಿನ ದಿಶಾ ರವಿ ಬಂಧನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಲವು ಸಮಸ್ಯೆಗಳ ಬಗ್ಗೆ ಆ ಹೆಣ್ಣುಮಗಳು ಹೋರಾಟ ಮಾಡಿದ್ದಾಳೆ. ಅಂತಹ ಹೆಣ್ಣುಮಗಳು ದೇಶದ ಭದ್ರತೆಗೆ ಧಕ್ಕೆ ತರಲು ಸಾಧ್ಯವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 

ಆ ಹೆಣ್ಣುಮಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಯಾರಾದರೂ ಕೇಂದ್ರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಿದ್ದರು. ಆದರೆ ಬಿಜೆಪಿ ನಾಯಕರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕೊಲ್ಲುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದರ ವಿರುದ್ಧ ದೇಶದ ಜನರೇ ಹೋರಾಟ ಆರಂಭಿಸಬೇಕು. ಪ್ರತಿಯೊಬ್ಬ ನಾಗರಿಕ ಈ ಬಗ್ಗೆ ಚಿಂತನೆ ಮಾಡಬೇಕು. ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಲೇ ಇದೆ. ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಜನರ ಅರಿವಿಗೇ ಇದು ಬರಬೇಕು. ಇವರ ಆಟಗಳಿಗೆಲ್ಲವೂ ಅಂತಿಮ ದಿನಗಳು ಬರುತ್ತವೆ ಎಂದು ಭವಿಷ್ಯ ನುಡಿದರು.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp