ಜನರಿಂದಲ್ಲ, ಸ್ವಪಕ್ಷ ನಾಯಕರ ಸಂಚಿನಿಂದ ಬಾದಾಮಿಯಲ್ಲಿ ಸೋತಿದ್ದೆ: ಸಚಿವ ಬಿ.ಶ್ರೀರಾಮುಲು

ನಾನು ಬಾದಾಮಿ ಕ್ಷೇತ್ರದಲ್ಲಿ ಸೋಲು ಕಂಡಿದ್ದು ಜನರಿಂದಲ್ಲ, ನಮ್ಮ ಪಕ್ಷದ ನಾಯಕರೇ ಸಂಚು ರೂಪಿಸಿ ಸೋಲು ಕಾಣುವಂತೆ ಮಾಡಿದ್ದರು ಎಂದು ಸಚಿವ ಬಿ.ಶ್ರೀರಾಮುಲು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Published: 22nd February 2021 08:07 AM  |   Last Updated: 22nd February 2021 12:39 PM   |  A+A-


Sriramulu

ಸಚಿವ ಬಿ.ಶ್ರೀರಾಮುಲು

Posted By : Manjula VN
Source : The New Indian Express

ಚಿತ್ರದುರ್ಗ: ನಾನು ಬಾದಾಮಿ ಕ್ಷೇತ್ರದಲ್ಲಿ ಸೋಲು ಕಂಡಿದ್ದು ಜನರಿಂದಲ್ಲ, ನಮ್ಮ ಪಕ್ಷದ ನಾಯಕರೇ ಸಂಚು ರೂಪಿಸಿ ಸೋಲು ಕಾಣುವಂತೆ ಮಾಡಿದ್ದರು ಎಂದು ಸಚಿವ ಬಿ.ಶ್ರೀರಾಮುಲು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರುಗಳಿಗೆ ಕೊಂಡ್ಲಹಳ್ಳಿ ಬಿಳಿನೀರು ಚಿಲುಮೆ ಬಳಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶ್ರೀರಾಮುಲು ಅವರು ಬಾದಾಮಿ ಸೋಲನ್ನು ನೆನೆದು ಬೇಸರ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಹಾಗೂ ಯಡಿಯೂರಪ್ಪನವರಿಗೆ ದೆಹಲಿಯಲ್ಲಿ ಅಮಿತ್ ಶಾ ಸೂಚಿಸಿದ್ದರು. ಅದರಂತೆ ಶಿಕಾರಿಪುರದಲ್ಲಿ ಯಡಿಯೂರಪ್ಪ, ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ಆಗ ಮೊಳಕಾಲ್ಮೂರು ಕ್ಷೇತ್ರದ ಜನ ಕೈ ಬಿಡಲ್ಲ ಎಂದು ಯಡಿಯೂರಪ್ಪ ಬಳಿ ಹೇಳಿದ್ದೆ. ಬಾದಾಮಿಯಲ್ಲಿ ಲಿಂಗಾಯತ, ಕುರುಬ ಸಮುದಾಯದವರು ಹೆಚ್ಚಿದ್ದರು. ನಮ್ಮ ವಾಲ್ಮೀಕಿ ಸಮುದಾಯ ಕೆಲವೇ ಮತದಾರರು ಮಾತ್ರ ಇದ್ದರು. ದಿವಂಗತ ಆನಂತ್ ಕುಮಾರ್ ಹೆಲಿಕಾಪ್ಟರ್ ಕೊಟ್ಟು ರಾಜ್ಯದ ಹಲವು ಕ್ಷೇತ್ರಗಳ ಜವಾಬ್ದಾರಿ ವಹಿಸಿದ್ದರು.

ಬಾದಾಮಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ 3-4 ದಿನ ಕೆಲಸ ಮಾಡಿದ್ದೆ‌, ರಾಜ್ಯದ 170 ಕ್ಷೇತ್ರದಲ್ಲಿ ನಾನು ಸುತ್ತಾಟ ನಡೆಸಿದ್ದೆ. ಆದರೆ ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 1400 ಮತಗಳಿಂದ ಸೋಲು ಅನುಭವಿಸಿದೆ. ನಾನು ಬಾದಾಮಿಯಲ್ಲಿ ಸೋತಿದ್ದು, ಜನರಿಂದ ಅಲ್ಲ ನಮ್ಮ ಪಕ್ಷದ ವ್ಯಕ್ತಿಗಳಿಂದ ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ನನ್ನ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀರಾಮುಲು ಬೇಡರ ಕುಲದವನು, ದಲಿತ.  ಅಮಿತ್ ಶಾ, ಮೋದಿ ಎರಡು ಕಡೆ ನಿಂತಿದ್ದಾರೆ. ಶ್ರೀರಾಮುಲು ಒಬ್ಬ ನಾಯಕ ಜನಾಂಗದವನು ಎರಡು ಕಡೆ ನಿಂತಿದ್ದಾನೆ. ಎರಡು ಕಡೆ ಗೆದ್ದರೆ ನಮಗೆ ಮುಳ್ಳಾಗುತ್ತಾನೆ ಎಂದು ಸಂಚು ಮಾಡಿ ಸೋಲಿಸಿದರು. ಮೊಳಕಾಲ್ಮೂರು ಕ್ಷೇತ್ರದ ಜನತೆ ನನ್ನ ಕೈಹಿಡಿದಿಲ್ಲ ಎಂದಿದ್ದರೆ, ನನ್ನ ರಾಜಕೀಯ ಭವಿಷ್ಯ ಜೀವನ ಕತ್ತಲಾಗುತ್ತಿತ್ತು ಎಂದಿದ್ದಾರೆ. ಇನ್ನೂ ಚುನಾವಣೆ ವೇಳೆ ಬಾದಾಮಿಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ಎಲ್ಲೋ ಒಂದು ಕಡೆ ನನ್ನ ವಿರುದ್ಧ‌ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ರಾಮುಲುಗೆ ಭಯ, ಹೆದರಿಕೆ ಎಂಬುದು ಇಲ್ಲ. ರಾಜಕಾರಣದಲ್ಲಿ ಈವತ್ತಿನ ತನಕ ಹೆದರಿಲ್ಲ, ಮುಂದೆಯೂ ಹೆದರುವುದಿಲ್ಲ. ಬಾದಾಮಿಯಲ್ಲಿ ಸೋತ ಸಂದರ್ಭ ಮೊಳಕಾಲ್ಮೂರು ಜನ ನನ್ನ ಕೈ ಹಿಡಿದರು. ಈ ಜನರನ್ನ ನನ್ನ ಕೊನೆಯ ಉಸಿರು ಇರುವವರೆಗೂ ಮರೆಯಲ್ಲ, ನಿಮ್ಮ ಜೊತೆಗೆ ಇರುತ್ತೇನೆ ಎಂದು ಭರವಸೆ ನೀಡಿದರು.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp