
ಜೆಡಿಎಸ್
ಬೆಂಗಳೂರು: ಜೆಡಿಎಸ್ ಗೆ ಹೊಸ ಶಕ್ತಿ, ಹೊಸ ರೂಪ ನೀಡಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಜೆಡಿಎಸ್ ನತ್ತ ಯುವಜನಾಂಗವನ್ನು ಆಕರ್ಷಿಸಲು ಯುವಘಟಕದ ಜೊತೆ ವಿದ್ಯಾರ್ಥಿ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, “ಜಯಪ್ರಕಾಶ್” ಹೆಸರಿನಲ್ಲಿ ಈ ಘಟಕ ಹಾಗೂ ಜೆ.ಪಿ.ಭವನದಲ್ಲಿ “ವಾರ್ ರೂಂ” ಆರಂಭವಾಗುತ್ತಿದೆ. ಇದೇ ಜ.16 ರಂದು ತೆನೆಹೊತ್ತ ಮಹಿಳೆ ಹೊಸ ರೂಪ ಪಡೆಯಲಿದ್ದಾಳೆ.
ಯುವ ಘಟಕಕ್ಕೆ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದರೂ ಸಹ ಯುವಘಟಕ ಅಷ್ಟೊಂದು ಚುರುಕಾಗಿಲ್ಲ. ಅಲ್ಲದೇ ಸಹೋದರರಾದ ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ನಡುವಿನ ಮನಸ್ತಾಪವನ್ನು ಕಡಿಮೆ ಮಾಡಿ ಯುವಘಟಕವನ್ನು ಹೆಚ್ಚು ಪ್ರಖರಗೊಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೂಚಿಸಿದ್ದು, ಅದರಂತೆ ನಿಖಿಲ್ ಹಾಗೂ ಪ್ರಜ್ವಲ್ ಒಟ್ಟಿಗೆ ಪಯಣ ಆರಂಭಿಸುವ ನಿರ್ಧಾರ ಕೈಗೊಂಡಿದ್ದಾರೆ.
ದೇವೇಗೌಡರಂತೆ ನಡೆದುಕೊಳ್ಳಿ ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆಯನ್ನೂ ನೀಡಿದ್ದಾರೆ. ಇದಕ್ಕಾಗಿ ಇಬ್ಬರ ನೇತೃತ್ವದಲ್ಲಿ ಯುವ ಘಟಕವನ್ನು ಚುರುಕುಗೊಳಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಅಲ್ಲದೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕ್ರಮ ರೂಪಿಸಲು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ರಾಜ್ಯದಲ್ಲಿ ಪೇರೆಂಟಲ್ ಬಾಡಿಗೆ ಪದಾಧಿಕಾರಿಗಳ ನೇಮಕಕ್ಕೂ ಚರ್ಚಿಸಲಾಗಿದೆ. ಇದಕ್ಕಾಗಿ ಜಿಲ್ಲಾವಾರು ಪಕ್ಷ ಸಂಘಟನೆ ಮತ್ತು ಪಕ್ಷದ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿ ಕೋರ್ ಕಮಿಟಿ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೂವತ್ತು ಜಿಲ್ಲೆಗೆ 30 ಕೆಲಸಗಾರರನ್ನು ಸಂಬಳಕೊಟ್ಟು ನೇಮಿಸಲಾಗುತ್ತಿದೆ. ಈ ಕೆಲಸಗಾರರು ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಆರಂಭಿಸಲಾಗುತ್ತಿರುವ “ಜೆಡಿಎಸ್ ವಾರ್ ರೂಮ್”ಗೆ ಜಿಲ್ಲಾವಾರು ಪಕ್ಷದ ಸಂಘಟನೆ, ಕಾರ್ಯಕ್ರಮ ಸಭೆ ಸೇರಿದಂತೆ ಮತ್ತಿತರ ಪಕ್ಷದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕಿದೆ. ಈ ಕೆಲಸಗಾರರಿಗೆ ಪಕ್ಷದ ವತಿಯಿಂದ ಇದಕ್ಕಾಗಿ ಗುರುತಿನ ಚೀಟಿಯನ್ನೂ ನೀಡಲಾಗುತ್ತಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯ ಹಿಂದುತ್ವ ಅಜೆಂಡಾ ಕುರಿತು ಕಿಡಿಕಾರಿದರು. ಬಿಜೆಪಿಯವರು ಬರೀ ಹಿಂದುತ್ವ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ ನಮಗೆ ಎಲ್ಲಾ ಸಮುದಾಯದವರು ಮುಖ್ಯ. ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಇನ್ನು ಮುಂದೆ ಜಾತ್ಯತೀತತೆ ಬಗ್ಗೆ ಚರ್ಚಿಸಲಾಗುತ್ತದೆ. ಇದು ಕನ್ನಡಿಗರ ಪಕ್ಷ, ಬೆಂಗಳೂರಿನಲ್ಲಿ ಈ ಪಕ್ಷ ಅಧಿಕಾರ ಹಿಡಿಯುತ್ತದೆ ಎಂದರು.
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕುರುಬರ ಸಂಖ್ಯೆ ಹೆಚ್ಚಾಗಿದೆ ಎಂದೇ ಅಲ್ಲಿ ಹೋಗಿ ಸ್ಪರ್ಧಿಸಿದ್ದು, ಇದು ಸಿದ್ದರಾಮಯ್ಯ ಅವರ ಜಾತ್ಯತೀತತೆಯೇ ಎಂದು ಕುಟುಕಿದರು. ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆಗೆ ಹೋಗಿ ಸಾಕಷ್ಟು ಅನುಭಿಸಿದ್ದೇನೆ. ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಅವರಿಗೆ ಎಲ್ಲಾ ಶಕ್ತಿ ನೀಡಿದ್ದೇನೆ. ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಕುತಂತ್ರದಿಂದ ಪಕ್ಷ 37 ಸ್ಥಾನಕ್ಕೆ ಕುಸಿಯಬೇಕಾಯಿತು. ಆದರೆ 2023 ರಲ್ಲಿ ಪಕ್ಷ ತನ್ನ ಸ್ವಂತ ಅಧಿಕಾರದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು. 2023ಕ್ಕೆ ಜೆಡಿಎಸ್ ಶಕೆ ಪ್ರಾರಂಭವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಧಾನಿ ಮೋದಿ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಹಣ ನೀಡುತ್ತೇವೆ ಎಂದು ಹೇಳಿ, ಕೇವಲ 1.5 ಲಕ್ಷ ಜನರಿಗೆ ಮಾತ್ರ ಹಣ ನೀಡಿದ್ದಾರೆ. ನಮಗೆ ಮನ್ ಕಿ ಬಾತ್ ಬೇಡ , ಕಾಮ್ ಕಿ ಬಾತ್ ಬೇಕು. ನಿಷ್ಠಾವಂತ ಕಾರ್ಯಕರ್ತರಿಗೆ ಹಸಿರು ಟವೆಲ್ ಕೊಡುವುದಿಲ್ಲ , ವೈಟ್ ಗ್ರೀನ್ ಟವೆಲ್ ಕೊಡೋಣ. ಕಾದಿಯ ಟವೆಲ್ ನಲ್ಲಿ ಮೋದಿ ತಮ್ಮ ಮುಖ ಒರೆಸಿಕೊಂಡು ಪಕ್ಷ ಸಂಘಟಿಸಲಿ ಎಂದು ಮಾರ್ಮಿಕವಾಗಿ ಕರೆ ನೀಡಿದರು.
ರಾಜ್ಯದ ಜನ ನನಗೆ ಬೆಂಬಲ ನೀಡಿದಲ್ಲಿ ಐದು ವರ್ಷಗಳ ಕಾಲ ಸಂಪೂರ್ಣ ಕಾರ್ಯಕ್ರಮ ಕೊಡುತ್ತೇನೆ. ಇದಕ್ಕಾಗಿ ಈಗಾಗಲೇ ಸಂಪೂರ್ಣ ತಯಾರಿ ಮಾಡುತ್ತಿದ್ದೇನೆ. ಸಾಲಮನ್ನಾ ಹೇಗಪ್ಪಾ ಮಾಡುತ್ತಾನೆ ಎಂದವರಿಗೆ ಉತ್ತರ ಕೊಟ್ಟಿದ್ದೇನೆ. ಪಕ್ಷದ ಪ್ರಣಾಳಿಕೆಯನ್ನು ಇಟ್ಟುಕೊಂಡು ಕಾರ್ಯಕರ್ತರು ಜನರ ಬಳಿ ಮತಯಾಚಿಸಲಿ. ತೇರು ಎಳೆಯುವಾಗ ಹಲವಾರು ಜನ ತೊಂದರೆ ಕೊಡುತ್ತಾರೆ, ಅವನ್ನೆಲ್ಲಾ ಎದರಿಸಿ ಮುಂದೆ ನಡೆಯಬೇಕು ಎಂದು ಪಕ್ಷ ಸಂಘಟನೆಗೆ ಕುಮಾರಸ್ವಾಮಿ ಕರೆ ನೀಡಿದರು.
ಜೆಡಿಯು , ಜೆಡಿಎಸ್ ಒಂದಾಗುವ ಕಾಲ ಬಂದಿತ್ತು. ಆದರೆ ಕೆಲವರು ಅದಕ್ಕೆ ಹುಳಿ ಹಿಂಡಿದರು. ಜೆಡಿಎಸ್-ಜೆಡಿಯು ಮತ್ತೆ ಒಂದಾಗಿದ್ದರೆ, ಇಂದು ಕಾಂಗ್ರೆಸ್, ಬಿಜೆಪಿ ಇರುತ್ತಿರಲಿಲ್ಲ ಎಂದರು.