
ಸಂಗ್ರಹ ಚಿತ್ರ
ಬೆಂಗಳೂರು: ಬ್ಲ್ಯಾಕ್ ಮೇಲ್ ಗೆ ಬೆದರಿ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಕೂಡ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಅವರು, ಕೆಲವರು ಸಿಡಿ ತೋರಿಸಿ ಹೆದರಿಸಿ, ಸಚಿವ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.
ಸಚಿವ ಸ್ಥಾನ ಪಡೆದ ಮೂವರು ಈ ಹಿಂದೆ ತಮ್ಮ ಬಳಿ ಬಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸೋಣ ಎಂದು ತಮ್ಮನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ನಾವೆಲ್ಲರೂ ಕೂಡಿ ಯಡಿಯೂರಪ್ಪರನ್ನು ಕೆಳಗಿಳಿಸೋಣ ಎಂದಿದ್ದರು. ಅವರ ಮಾತು ಕೇಳಿ ತಮಗೆ ಆಶ್ಚರ್ಯವಾಗಿತ್ತು ಆದರೆ, ಆಗ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ ಎಂದು ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು. ಹಣದ ಆಮಿಷ ಪಡೆದು ಸಚಿವ ಸ್ಥಾನ ನೀಡಿದ್ದಾರೆ. ಆ ಮೂಲಕ ಸಮಸ್ತ ಲಿಂಗಾಯತ ವೀರಶೈವ ಸಮಾಜದ ಮರ್ಯಾದೆಯನ್ನು ಯಡಿಯೂರಪ್ಪ ತೆಗೆದಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ. ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ತಮ್ಮನ್ನು ಕೆಳಗಿಳಿಸಿದರೆ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ ಎಂದರು.
ಸಂಕ್ರಮಣದ ಉತ್ತರಾಯಣದ ಮೂಲಕ ಯಡಿಯೂರಪ್ಪ ಅಂತ್ಯ ಆರಂಭವಾಗಲಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಭವಿಷ್ಯ ನುಡಿದರು.