ಒಂದು ಕುಟುಂಬಕ್ಕೆ ಒಂದೇ ಹುದ್ದೆ ನೀತಿ ಜಾರಿಗೆ ತನ್ನಿ: ಯಡಿಯೂರಪ್ಪ ಕುಟುಂಬದ ವಿರುದ್ದ ಯತ್ನಾಳ್ ಕಿಡಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಗುಡುಗಿದ್ದಾರೆ. ಒಂದೇ ಕುಟುಂಬಕ್ಕೆ ಎಂಎಲ್ಎ, ನಿಗಮ ಮಂಡಳಿ...
Published: 20th January 2021 08:10 PM | Last Updated: 20th January 2021 08:10 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಗುಡುಗಿದ್ದಾರೆ. ಒಂದೇ ಕುಟುಂಬಕ್ಕೆ ಎಂಎಲ್ಎ, ನಿಗಮ ಮಂಡಳಿ, ಲೋಕಸಭೆ, ರಾಜ್ಯಸಭೆ, ಪಕ್ಷದ ಜವಾಬ್ದಾರಿ ಎಲ್ಲವೂ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಒಂದು ಕುಟುಂಬದ ಒಬ್ಬರಿಗೇ ಮಾತ್ರ ಅಧಿಕಾರ ಕೊಡಬೇಕು ಎಂದು ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ವಂಶ ಪಾರಂಪರ್ಯ ಆಡಳಿತ ಅಂತ್ಯ ಆಗಬೇಕು, ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡಬೇಕು ಎಂಬುದು ಪ್ರಧಾನಿ ಕನಸು. ಈ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತಿದ್ದೇನೆ ಎಂದರು.
ಮುಖ್ಯಮಂತ್ರಿ ಅವರ ಮನೆಯಲ್ಲೇ ಅಷ್ಟೂ ಜನ ಇದ್ದಾರೆ ಎಂದು ಹೇಳುತ್ತಿದ್ದೇನೆ. ಯಾರ ಯಾರ ಮನೆಯಲ್ಲಿ ಜಾಸ್ತಿ ಜನ ಇದ್ದಾರೋ, ಅವರಿಗೆ ನೀಡಿರುವ ಅಧಿಕಾರವನ್ನು ಕತ್ತರಿಸಿ ಒಂದೇ ಹುದ್ದೆ ಕೊಡಬೇಕು. ಕಾರ್ಯಕರ್ತರಿಗೆ ಬಿಟ್ಟು ಕೊಡಬೇಕು. ಕಾರ್ಯಕರ್ತರು ಏನು ಇವರನ್ನು ತಲೆ ಮೇಲೆ ಹೊತ್ತು ಅಡ್ಡಾಡಲು ಇದ್ದಾರಾ?. ಕಾರ್ಯಕರ್ತರನ್ನು ಸಮರ್ಥವಾಗಿ ಬೆಳೆಸಿ. ಇದರಲ್ಲಿ ನನ್ನ ವೈಯಕ್ತಿಕ ಏನೂ ಇಲ್ಲ, ಮಂತ್ರಿ ಮಾಡಬೇಕು ಅಂತಾನೂ ಇಲ್ಲ ಎಂದು ಕಿಡಿ ಕಾರಿದರು.
ಬಿಜೆಪಿ ಶಾಸಕರ ಪ್ರತ್ಯೇಕ ಸಭೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಯಾವ್ಯಾವ ಸಭೆ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಿಡಿ ವಿಚಾರವನ್ನು ಯಾರು ಓಪನ್ ಮಾಡಿದರೋ ಅವರೇ ಕ್ಲೋಸ್ ಮಾಡಬೇಕು. ನಾನು ಓಪನ್ ಮಾಡಿದವನೂ ಅಲ್ಲ, ಕ್ಲೋಸ್ ಮಾಡಿದವನೂ ಅಲ್ಲ. ಯಾರನ್ನು ಯಾರು ಸಮಾಧಾನ ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿ ನನಗಿದೆ. ಆ ಶಕ್ತಿ ಕೆಲಸ ಮಾಡುತ್ತದೆ. ವಿಚಾರ, ವಿವಾದ ಏನೂ ಕೂಡಾ ತಣ್ಣಗಾಗಿಲ್ಲ. ನಾನು ತಣ್ಣಗೂ ಆಗಲ್ಲ, ಬೆಚ್ಚಗೂ ಆಗಲ್ಲ, ಅಂಜುವುದೂ ಇಲ್ಲ. ನಮ್ಮ ಧಾಟಿ ಹಾಗೆಯೇ ಇರುತ್ತದೆ. ನಾನು ಎಲ್ಲಿ ಯಾವಾಗ ಏನು ಮಾತಾಡಬೇಕೋ ಮಾತಾಡುತ್ತೇನೆ ಎಂದು ಗುಡುಗಿದರು.
ರೇಣುಕಾಚಾರ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಯಾರ ಬಗ್ಗೆ ಮಾತಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರು ಯಾರ ಪರವಾಗಿ ಮಾತಾಡುತ್ತಿದ್ದಾರೆ ಅಂತಾನೂ ಗೊತ್ತಿಲ್ಲ. ರೇಣುಕಾಚಾರ್ಯ ಯಾರ ಬಗ್ಗೆ ದೂರು ನೀಡಲು ಹೋಗಿದ್ದಾರೆ? ಮಂತ್ರಿ ಮಾಡಿದವರು ಯಾರು? ಪಾಪ ಕೇಂದ್ರದವರನ್ನು ಯಾಕೆ ಹೊಣೆ ಮಾಡಬೇಕು?. ಕೇಂದ್ರದವರದ್ದು ಏನೂ ಹಸ್ತಕ್ಷೇಪ ಇರಲಿಲ್ಲ. ಎಲ್ಲಾ ಅಧಿಕಾರ ಮುಖ್ಯಮಂತ್ರಿ ಬಳಿ ಇತ್ತು, ಅವರು ಮಂತ್ರಿ ಮಾಡಿದ್ದಾರೆ ಎಂದು ತಿಳಿಸಿದರು.
ದೊಡ್ಡವರು ತ್ಯಾಗ ಮಾಡಬೇಕು. ಹಿರಿಯರು ಪಕ್ಷದ ಕಡೆ ಹೋಗಬೇಕು, ಪಕ್ಷದ ಸಂಘಟನೆ ಮಾಡಬೇಕು. ಹಿರಿಯರು ಹಳ್ಳಿ ಹಳ್ಳಿಗೆ ಹೋಗಬೇಕು. ಹೊಸಬರು, ಯುವಕರು ಸಚಿವರಾಗಲು ಅವಕಾಶ ಕೊಡಬೇಕು. ಶಿವನಗೌಡ ನಾಯಕ್ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಅವರೇನೂ ತಪ್ಪು ಮಾತಾಡಿಲ್ಲ, ಒಳ್ಳೆಯದನ್ನೇ ಮಾತಾಡಿದ್ದಾರೆ ಎಂದರು.
ನಮಗೂ ಸರ್ಕಾರದಿಂದ ಅನುದಾನ ಕೊಡಿ ಅಂತಾ ಕೇಳುತ್ತಿದ್ದೇವೆ. ನಾವೇನೂ ಅವರ ಮನೆಯಿಂದ, ಪರ್ಸನಲ್ ಪಾಕೆಟ್ ನಿಂದ ಕೇಳುತ್ತಿಲ್ಲ. ನೀವು ಬಹಳ ಮಾಡಿಕೊಂಡಿದ್ದೀರಿ, ನಮಗೂ ಸ್ವಲ್ಪ ಕೊಡಿ ಅಂತಾ ಕೇಳುತ್ತಿದ್ದೇವಾ? ಎಂದು ಟಾಂಗ್ ನೀಡಿದರು.