ಅಮಿತ್ ಶಾ ಖಡಕ್ ಎಚ್ಚರಿಕೆಗೂ ಬಗ್ಗದ ಅತೃಪ್ತ ಬಿಜೆಪಿ ನಾಯಕರು: ದೆಹಲಿಗೆ ಭೇಟಿ ನೀಡಿ ವರಿಷ್ಠರಿಗೆ ದೂರು
ಸಚಿವ ಸಂಪುಟ ವಿಸ್ತರಣೆ ಬಳಿಕ, ಅತೃಪ್ತ ಶಾಸಕರಿಗೆ ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ನೀಡಿದ ಖಡಕ್ ಎಚ್ಚರಿಕೆಗೂ ಬಗ್ಗದ ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿಮಾಡಿದ್ದು, ಭೇಟಿ ವೇಳೆ ತಮ್ಮ ಅತೃಪ್ತಿ, ಅಸಮಾಧಾನ ಹೊರಹಾಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
Published: 20th January 2021 08:07 AM | Last Updated: 20th January 2021 12:21 PM | A+A A-

ರೇಣುಕಾಚಾರ್ಯ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ, ಅತೃಪ್ತ ಶಾಸಕರಿಗೆ ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ನೀಡಿದ ಖಡಕ್ ಎಚ್ಚರಿಕೆಗೂ ಬಗ್ಗದ ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿಮಾಡಿದ್ದು, ಭೇಟಿ ವೇಳೆ ತಮ್ಮ ಅತೃಪ್ತಿ, ಅಸಮಾಧಾನ ಹೊರಹಾಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅತೃಪ್ತ ಶಾಸಕರ ಧ್ವನಿಯಾಗಿ ಕಳೆದವಾರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು ಹಾಗೆಯೇ ನೂತನ ಸಚಿವ ಯೋಗೇಶ್ವರ್ ವಿರುದ್ಧ ದೂರು ನೀಡಿ , ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರವಿರುದ್ಧ ಅತೃಪ್ತಿ ಹೊರಹಾಕಿದ್ದರು ವರಿಷ್ಠರು ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿ ರೇಣುಕಾಚಾರ್ಯ ಅವರನ್ನು ಸಾಗಹಾಕಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕವೂ ಪಟ್ಟು ಬಿಡದ ರೇಣುಕಾಚಾರ್ಯ ಅವರು ಮತ್ತೆ ದೆಹಲಿಗೆ ತೆರಳಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಹ್ಲಾದ್ ಜೋಶಿ ಹಾಗೂ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ್ದಾರೆ.
ಶನಿವಾರವಷ್ಟೇ ರೇಮುಕಾಚಾರ್ಯ ಅವರು ದೆಹಲಿಗೆ ತೆರಳಿದ್ದರು, ಈ ವೇಳೆ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಮಂಗಳವಾರ ಸಂಜೆ ಪ್ರಹ್ಲಾದ ಜೋಶಿ ಅವರ ಜೊತೆ ಸುಮಾರು 2 ತಾಸು ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿರುವುದಾಗಿ ತಿಳಿಸಿದರು. ನಾವು ಪಕ್ಷದ ಭಿನ್ನಮತೀಯರು ಅಥವಾ ಬಂಡಾಯ ಶಾಸಕರಲ್ಲ. ಪಕ್ಷದ ಚೌಕಟ್ಟಿನೊಳಗೆ ನಮ್ಮ ಕಾನೂನುಬದ್ಧ ಕಾಳಜಿಗಳನ್ನು ಮಾತ್ರ ವ್ಯಕ್ತಪಡಿಸುತ್ತಿದ್ದೇವೆ. ಪಕ್ಷ ಅಥವಾ ಮುಖ್ಯಮಂತ್ರಿ ವಿರುದ್ಧ ಯಾವುದೇ ದೂರುಗಳನ್ನೂ ನೀಡಿಲ್ಲ ಎಂದು ಹೇಳಿದರು. ಬಳಿಕ ರಾತ್ರಿ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.