ಕೇಂದ್ರ ಸರ್ಕಾರ ಪ್ರತಿಷ್ಠೆಯಾಗಿ ನೋಡದೆ ಕೃಷಿ ಕಾಯ್ದೆಯನ್ನು ಹಿಂಪಡೆಯಲೇ ಬೇಕು: ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ಕೃಷಿ ಕಾಯ್ದೆ ವಿರುದ್ಧ ಭಿನ್ನಾಭಿಪ್ರಾಯ ಮುಂದುವರಿದಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
Published: 24th January 2021 08:43 AM | Last Updated: 24th January 2021 11:54 AM | A+A A-

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ಕೃಷಿ ಕಾಯ್ದೆ ವಿರುದ್ಧ ಭಿನ್ನಾಭಿಪ್ರಾಯ ಮುಂದುವರಿದಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ಕಾಯ್ದೆಯನ್ನು ವಾಪಸ್ ಪಡೆಯಬೇಕೆ ಹೊರತು ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ನೋಡಬಾರದು ಎಂದು ಹೇಳಿದ್ದಾರೆ.
ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ದೇಶದ ಆರ್ಥಿಕತೆ, ಕಾಂಗ್ರೆಸ್ , ಬಿಜೆಪಿ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ:
ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತದೆಯೇ?
ರೈತರ ಹಿತಾಸಕ್ತಿಗೆ ಕಾಂಗ್ರೆಸ್ ಯಾವಾಗಲೂ ಶ್ರಮಿಸುತ್ತದೆ. ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ರೈತರ ಪ್ರತಿಭಟನೆಗೆ ಬೆಂಬಲ ಮಾತ್ರವಲ್ಲದೆ ಕೇಂದ್ರ ಸರ್ಕಾರ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ಕಾಯ್ದೆ ಬಗ್ಗೆ ನಾವು ಹಿಂದೆ ಕೂಡ ಹೋರಾಟ ಮಾಡಿದ್ದೆವು. ಕಾಂಗ್ರೆಸ್ ನ ಮೂವರು ಸೇರಿದಂತೆ 8 ಮಂದಿ ಸದಸ್ಯರು ಅಮಾನತುಗೊಂಡಿದ್ದರು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕಾರಣಿ ಕಳೆದ ಶುಕ್ರವಾರ ಚರ್ಚೆ ನಡೆಸಿದೆ.
ರೈತರ ಪ್ರತಿಭಟನೆ ಕೊನೆಗಾಣಿಸಲು ಕೇಂದ್ರ ಸರ್ಕಾರ ನಿಜವಾಗಿಯೂ ಶ್ರಮಿಸುತ್ತಿದೆಯೇ?
-ಕಳೆದ 60 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿಗಳು ಇದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ. ಸರ್ಕಾರ ಇದನ್ನು ಹಿನ್ನಡೆ ಎಂದು ಭಾವಿಸಿದ್ದು ಕಾಯ್ದೆ ಹಿಂದೆಗೆದುಕೊಂಡರೆ ಅವಮಾನ ಎಂದು ಭಾವಿಸುತ್ತಿದೆ. ಇನ್ನಷ್ಟು ದಿನ ಮುಂದೂಡಿದರೆ ರೈತರು ಪ್ರತಿಭಟನೆ ವಾಪಸ್ ಪಡೆದು ಸುಮ್ಮನಾಗಬಹುದು ಎಂಬುದು ಸರ್ಕಾರದ ಲೆಕ್ಕಚಾರ. ಈಗಾಗಲೇ ರೈತ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಆದರೆ ಪ್ರತಿಭಟನಾಕಾರರು ಒಂದಾಗಿದ್ದಾರೆ, ಕಾಯ್ದೆ ಹಿಂತೆಗೆದುಕೊಳ್ಳುವವರೆಗೂ ಹಿಂತಿರುಗುವುದಿಲ್ಲ ಖಂಡಿತ. ಈ ಬಗ್ಗೆ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಸ್ತ್ರೃತವಾಗಿ ಚರ್ಚೆ ಮಾಡಲೇ ಇಲ್ಲ. ಮೂರು ಕಾಯ್ದೆಗಳು ರೈತರಿಗೆ ವಿರುದ್ಧವಾಗಿದ್ದು ಸಾಮಾನ್ಯ ಜನರಿಗೆ ಸಹ ಉತ್ತಮವಾಗಿಲ್ಲ. ಖಾಸಗಿ ಕಂಪೆನಿಗಳು ಇಡೀ ರೈತ ವಲಯವನ್ನು ನಿಯಂತ್ರಣ ಮಾಡಬಹುದು, ಇದರಿಂದ ಸಾಮಾನ್ಯ ಜನರು ಕಷ್ಟದಿಂದ ಬಳಲಿ ಹೋಗುತ್ತಾರೆ.
ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳುತ್ತದೆಯಲ್ಲವೇ?
ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಮುಂದುವರಿಸಬಹುದು, ಆದರೆ ಎಷ್ಟು ಸಂಗ್ರಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ. ಸರ್ಕಾರ ಈ ಬಗ್ಗೆ ಹೇಳಿಕೆಯನ್ನು ನೀಡಿರಬಹುದು, ಆದರೆ ಕಾಯ್ದೆಯಲ್ಲಿ ಅದು ಇಲ್ಲ. ಕನಿಷ್ಠ ಬೆಂಬಲ ಬೆಲೆಯಡಿ ಸಂಗ್ರಹಿಸುತ್ತೇವೆ ಎಂದು ಕಾಯ್ದೆಯಲ್ಲಿ ಹೇಳಲಿ. ಬೆಲೆ ನಿಗದಿಪಡಿಸಲು ಎಪಿಎಂಸಿ ಮಾರುಕಟ್ಟೆ ಮೂಲವಾಗಬೇಕು. ಇದರಿಂದ ಬೇರೆ ಬೇರೆ ಸ್ಥಳಗಳಲ್ಲಿ ರೈತರಿಗೆ ಬೆಲೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಸರ್ಕಾರ ಬಿಹಾರದ ಉದಾಹರಣೆ ನೀಡುತ್ತದೆ. ಆದರೆ ಪಂಜಾಬ್ ಭಾಗದ ರೈತರು ಭತ್ತ, ಗೋಧಿಯನ್ನು ಮಾರಾಟ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆ ನಿಯಂತ್ರಿಸುವುದಿಲ್ಲ. ರೈತರನ್ನು ಬೆಂಬಲಿಸಲು ವೇದಿಕೆ ನೀಡುತ್ತದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
ಈ ಸಮಸ್ಯೆ ಬಗೆಹರಿಸುವುದು ಹೇಗೆ?
ದೇಶದ, ರೈತರ, ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವುದು ಒಳ್ಳೆಯದಲ್ಲವೇ?
ಮುಂದಿನ ಬಾರಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರಾ?
ಕಾಂಗ್ರೆಸ್ ನ ಆಂತರಿಕ ಚುನಾವಣೆಗೆ ಸೋನಿಯಾ ಗಾಂಧಿಯವರು ಚುನಾವಣಾ ದಿನಾಂಕ ನಿಶ್ಚಯಿಸಲಿದ್ದಾರೆ. 5 ರಾಜ್ಯಗಳ ಚುನಾವಣೆ ಮುಗಿದ ಬಳಿಕ ಆಗಲಿದೆ. ದೇಶದ ಒಗ್ಗಟ್ಟಿಗೆ ಮತ್ತು ನಮ್ಮ ಸಂಸ್ಥೆಗಳನ್ನು ಕಾಪಾಡಲು ಗಟ್ಟಿಯಾದ ರಾಷ್ಟ್ರೀಯ ಪಕ್ಷ ಬೇಕಾಗಿದೆ.