ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮ: ನಳಿನ್ ಕುಮಾರ್ ಕಟೀಲ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ದೆಹಲಿಯ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Published: 24th January 2021 07:38 AM | Last Updated: 24th January 2021 07:38 AM | A+A A-

ನಳಿನ್ ಕುಮಾರ್ ಕಟೀಲ್
ಬೆಂಗಳೂರು: ಶಾಸಕರು,ಸಚಿವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ಆದರೆ ಅದರಿಂದ ಪಕ್ಷಕ್ಕೆ ಮುಜುಗರ, ಹಾನಿ ಯಾಗುವಂತಾದರೆ ಕರೆಸಿ ಮಾತನಾಡುತ್ತೇನೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ದೆಹಲಿಯ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ, ತಿಪ್ಪಾರೆಡ್ಡಿ ಹೇಳಿಕೆಗಳೆಲ್ಲವೂ ಅವರವರ ಭಾವಕ್ಕೆ, ಭಕುತಿಗೆ. ಶಾಸಕರನ್ನು ಕರೆಸಿ ಮಾತನಾಡಿ ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲಾಗುವುದು. ಕೆಲವರ ಹೇಳಿಕೆಗಳು ಪಕ್ಷದ ಘನತೆಗೆ ಧಕ್ಕೆ ತಂದಿಲ್ಲ.ಎಲ್ಲವನ್ನೂ ಸರಿಮಾಡಲಾಗುವುದು.
ಬಸನಗೌಡ ಪಾಟೀಲ್ ಯತ್ನಾಳ್ ಸಮಸ್ಯೆ ಬಗ್ಗೆ ಕೋರ್ ಕಮಿಟಿಯಲ್ಲಿಯೂ ಚರ್ಚೆಯಾಗಿದೆ ಎಂದರು.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗುರವನ್ನುಂಟು ಮಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನು, ಅವರು ಮುಜುಗರ ಉಂಟು ಮಾಡುತ್ತಿರುವುದನ್ನು ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತಂದಿದ್ದೇವೆ. ಪಕ್ಷದ ವೇದಿಕೆಯಲ್ಲಿ ಆ ಬಗ್ಗೆ ಚರ್ಚಿಸಿ ಅದನ್ನು ಸರಿಪಡಿಸಲಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿಕೆ ನೀಡಿದ್ದಾರೆ.