ಖಾತೆ ಬದಲಾವಣೆ: ಸಮನ್ವಯದ ಕೊರತೆಯ ಅಪಾಯ; ಸಚಿವ ಸುಧಾಕರ್ ಅಸಮಾಧಾನ

ಪ್ರತಿಯೊಂದಕ್ಕೂ ಹೈಕಮಾಂಡ್ ನತ್ತ ಮುಖ ಮಾಡುವ ಯಡಿಯೂರಪ್ಪನವರು ಅದರಿಂದಲೂ ಪ್ರೇರಣೆ ಪಡೆದು ಇಲಾಖೆಗಳನ್ನು ವಿಲೀನಗೊಳಿಸಲಿ, minimum government maximum governance ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆಯಲ್ಲವೇ?

Published: 24th January 2021 03:06 PM  |   Last Updated: 24th January 2021 03:49 PM   |  A+A-


Minister Sudhakar and CM Yeddyurappa (file pic)

ಖಾತೆ ಬದಲಾವಣೆ: ಸಮನ್ವಯದ ಕೊರತೆಯ ಅಪಾಯ; ಸಚಿವ ಸುಧಾಕರ್ ಅಸಮಾಧಾನ

Posted By : Srinivas Rao BV
Source : Online Desk

ಸಾಂಕ್ರಾಮಿಕ ರೋಗಗಳು, ಅವುಗಳ ನಿಯಂತ್ರಣದಲ್ಲಿ ಜಗತ್ತಿಗೇ ಮಾದರಿಯಾಗಬಲ್ಲಂತಹ ಪೂರ್ವದರ್ಶಿಗಳ ಇತಿಹಾಸವನ್ನು ಕರ್ನಾಟಕ ಹೊಂದಿದೆ. ಕೊರೋನಾ ಕಾಲದಲ್ಲಿ ನಾವಿದನ್ನು ಅದೆಷ್ಟು ಬಾರಿ ನೆನಪು ಮಾಡಿಕೊಂಡಿಲ್ಲ?

1806 ರಲ್ಲಿ ಭಾರತದಲ್ಲಿ ಸಿಡುಬಿಗೆ ಲಸಿಕೆಯನ್ನು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾಗ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರ ಪತ್ನಿ ದೇವಜಾ ಅಮ್ಮಣಿಯವರು ಸ್ವತಃ ಲಸಿಕೆಯನ್ನು ಸ್ವೀಕರಿಸಲು ಒಪ್ಪಿ ಇಡೀ ದೇಶಕ್ಕೇ ಮಾದರಿಯಾದರು.  

ಕೇವಲ ಇದೊಂದೇ ಉದಾಹರಣೆಯಷ್ಟೇ ಅಲ್ಲ, ಸಾಂಕ್ರಾಮಿಕದ ಸಂದರ್ಭದಲ್ಲಿ ಆಡಳಿತ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಈಗ್ಗೆ ಶತಮಾನದ ಹಿಂದೆ 1918 ರಲ್ಲಿ ಸ್ಪ್ಯಾನಿಷ್ ಜ್ವರ (Spanish flu) ಎದುರಾದಾಗ ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಹೇಳಿದ್ದ "ಸಾರ್ವಜನಿಕರು ತೊಂದರೆಗಳನ್ನು ಎದುರಿಸುತ್ತಿರುವಾಗಲೂ, ಅದರಿಂದ ಲಾಭ ಮಾಡಿಕೊಳ್ಳುವಂತಹ ಯಾವುದೇ ಸಮುದಾಯದ ಭಾಗಗಳೆಡೆಗೆ ಸರ್ಕಾರದ ಬಲಿಷ್ಠ ಕೈಗಳು ಸದಾ ಸಾಕ್ಷಿಯಾಗಿರಬೇಕು, ನಿರ್ದಾಕ್ಷ್ಯಿಣ್ಯವಾಗಿ ನಿರಂತರ ಹಸ್ತಕ್ಷೇಪದಿಂದ ಅಂತಹ ಪರಿಸ್ಥಿತಿಗಳನ್ನು ನಿಯಂತ್ರಿಸಬೇಕು" ಎಂಬ ಮಾತು ನೆನಪಾಗುತ್ತದೆ.

ಇಂತಹ ಹಿನ್ನೆಲೆ ಇರುವ ಕರ್ನಾಟಕ ರಾಜ್ಯ, ಇಲ್ಲಿಯವರೆಗೂ ಕೊರೋನಾ ನಿಯಂತ್ರಣ, ಲಸಿಕೆಯ ವಿತರಣೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಇತ್ತೀಚಿನ ಕೆಲವು ಬದಲಾವಣೆಗಳನ್ನು ನೋಡಿದರೆ, ಲಸಿಕೆ ವಿತರಣೆ ಆದ್ಯತೆಯ ನಾಗರಿಕರನ್ನು ತಲುಪಿ ಸಾಮಾನ್ಯ ಜನರ ಬಳಿಗೆ ಬರುವ ವೇಳೆಗೆ ಇನ್ನೇನು ಸಮಸ್ಯೆಗಳು ಎದುರಾಗುತ್ತವೆಯೋ ಎಂಬ ಭಯ ಮೂಡುತ್ತಿದೆ.

ಸಾಂಕ್ರಾಮಿಕ ನಿರ್ವಹಣೆಗೆ ಹೆಸರಾಗಿದ್ದ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಕೊರೋನಾ ಕಾಲದ ಪ್ರಾರಂಭಿಕ ದಿನಗಳಲ್ಲಿ ಒಮ್ಮೆ ನೆನಪಿಸಿಕೊಳ್ಳಿ.

ಕೊರೋನಾ ನಿಯಂತ್ರಣ, ತಬ್ಲಿಘಿಗಳ ನಿಯಂತ್ರಣ, ಲಾಕ್ ಡೌನ್, ಶಿಕ್ಷಣ ಸಂಸ್ಥೆಗಳಿಂದ ಅನುಚಿತವಾಗಿ ಉಂಟಾಗುತ್ತಿದ್ದ ಶುಲ್ಕಗಳ ಬೇಡಿಕೆ ಪ್ರಕರಣಗಳನ್ನು ನಿರ್ವಹಿಸುವುದು...  ಅದೆಷ್ಟು ಗೊಂದಲಗಳು, ಅದೆಷ್ಟು ಕ್ಷಣಿಕ ನಿರ್ಧಾರಗಳು.... ಕೊರೋನಾ ಪ್ರಾರಂಭದ ದಿನಗಳಿಂದಲೂ ರಾಜ್ಯ ನೇತೃತ್ವದ ಸರ್ಕಾರ ಒಂದೇ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡ ಉದಾಹರಣೆ ಇಲ್ಲ. ಆಂತರಿಕ ಸಮಸ್ಯೆಗಳನ್ನು ನಿಭಾಯಿಸುವುದರಲ್ಲೇ ಜರ್ಝರಿತರಾದ ಸಿಎಂ, ಕೆಲವು ತಿಂಗಳುಗಳ ಕಾಲ ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಗಳನ್ನು ಒಬ್ಬರೇ ಸಚಿವರಿಗೆ ನೀಡಿದರು. ಅಂದಿನಿಂದ ಸರ್ಕಾರದ ಸಚಿವರ ಶ್ರಮವೋ, ದೇವರ ಕೃಪೆಯೋ, ಒಟ್ಟಿನಲ್ಲಿ ರಾಜ್ಯದ ಸ್ಥಿತಿ ಸುಧಾರಿಸಿತ್ತು. ಎಲ್ಲವೂ ಇನ್ನೇನು ನಿಯಂತ್ರಣಕ್ಕೆ ಬರುತ್ತಿದೆ, ಕರ್ನಾಟಕ ಯಶಸ್ವಿಯಾಗಿ ಕೊರೋನಾವನ್ನು ನಿಯಂತ್ರಿಸಿದೆ ಎನ್ನುವಷ್ಟರಲ್ಲಿ ಪರಿಸ್ಥಿತಿಯನ್ನು ಕದಡುವಂತಹ ನಿರ್ಧಾರಕ್ಕೆ ರಾಜ್ಯ ಹಾಸ್ಯದ ವಸ್ತುವಾಗುವ ಅಂಚಿನಲ್ಲಿದೆ.

ವೈದ್ಯಕೀಯ ಶಿಕ್ಷಣ, ಆರೋಗ್ಯ ಖಾತೆಗಳು ಜೊತೆಗಿದ್ದಷ್ಟೂ ಇಂತಹ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಸಾಧ್ಯ. ಕರ್ನಾಟಕವನ್ನು ಹೊರತುಪಡಿಸಿದರೆ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿಯೂ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಗಳು ಬೇರೆ ಬೇರೆಯಾಗಿರುವ ಉದಾಹರಣೆಗಳಿಲ್ಲ. ಇಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅವರ ಅವಧಿಯಲ್ಲಿ ಸಚಿವ ಸಂಪುಟದ ಗಾತ್ರ ಹೆಚ್ಚಾಗಿದ್ದ ಕಾರಣದಿಂದಾಗಿ ಬೇರ್ಪಟ್ಟು ಹೊಸ ಖಾತೆಗಳಾಗಿ ಕವಲೊಡೆದವುಗಳ ಪೈಕಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣಗಳೂ ಇವೆ. ಪೂರಕವಾಗಿರುವ ಒಂದೇ ಇಲಾಖೆಯ ವಿಭಾಗವನ್ನು ರಾಜಕೀಯ ಹಾಗೂ ತಾತ್ಕಾಲಿಕ "ಪರಮಾಧಿಕಾರದ ಲಾಭ"ದ ಕಾರಣಗಳಿಗಾಗಿ ಬೇರ್ಪಡಿಸಿದ ಪರಿಣಾಮ ಇಂದಿಗೂ ತಾಂತ್ರಿಕವಾಗಿ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಮೇಲ್ನೋಟಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆಗಳು ಬೇರೆ ಇಲಾಖೆಗಳಂತೆ ಕಂಡರೂ ಸಹ ಮೂಲಭೂತವಾಗಿ Cadre and Recruitment Rules ಗಳೇ ಇನ್ನೂ ಪ್ರತ್ಯೇಕವಾಗಿಲ್ಲ. ಎರಡೂ ಇಲಾಖೆಗಳು ಅಧಿಕೃತವಾಗಿ ಬೇರೆಯದ್ದಾಗಿಲ್ಲ. ಮೂಲಸೌಕರ್ಯ, ಮಾನವ ಸಂಪನ್ಮೂಲ ಒಂದೆಡೆ ಇದ್ದರೆ, ಅದನ್ನು ಕಾರ್ಯಗತ ಮಾಡುವ ವ್ಯವಸ್ಥೆ ಮತ್ತೊಂದೆಡೆಯಾದರೆ ಸಮನ್ವಯ ಸಾಧಿಸುವುದು ಹೇಗೆ? ಸಾಂಕ್ರಾಮಿಕ ರೋಗ, ಲಸಿಕೆಯ ಪರಿಣಾಮಕಾರಿ ವಿತರಣೆಯನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆ? ಇದನ್ನೇ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಸೇರಿದಂತೆ ಪ್ರಾಜ್ಞರು ಶುದ್ಧ ಅವೈಜ್ಞಾನಿಕ ರೀತಿಯ ಸಚಿವ ಸಂಪುಟ ಎಂದಿರುವುದು.

ರಾಜಕೀಯ ಕಾರಣಗಳೇನಾದರೂ ಇರಲಿ, ಸಾರ್ವಜನಿಕರ ಹಿತಾಸಕ್ತಿಯನ್ನಷ್ಟೇ ಗಮನದಲ್ಲಿಟ್ಟುಕೊಂಡರೆ, ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಸುಧಾಕರ್ ಎರಡೂ ಖಾತೆಗಳೂ ತಮಗೇ ನೀಡಿ ಎಂದು ಎಲ್ಲೂ ಪಟ್ಟು ಹಿಡಿದಿಲ್ಲ. ಅವರ ಬೇಡಿಕೆ ಒಂದೇ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಯಾರಿಗಾದರೂ ಕೊಡಿ, ಆದರೆ ಅದರಲ್ಲಿ ಒಬ್ಬರಿಗೆ ಮಾತ್ರ ಕೆಲಸ ಮಾಡಲು ಬಿಡಿ ಎಂಬುದಷ್ಟೇ.

ಇನ್ನು ವೈದ್ಯಕೀಯ ಖಾತೆಯನ್ನು ಹೆಗಲಿಗೆ ಕಟ್ಟಿಸಿಕೊಂಡಿರುವ ಮಾಧುಸ್ವಾಮಿ ಅವರೇ ತಾವು ಈ ಖಾತೆಗೆ ಸೂಕ್ತ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಾಂಕ್ರಾಮಿಕದಂತಹ ತುರ್ತು ಪರಿಸ್ಥಿತಿಯಲ್ಲೂ, ಸಮನ್ವಯದ ಕೊರತೆ ಎದುರಾಗಿ, ಪರಿಸ್ಥಿತಿ ಕೈ ಮೀರಿದರೆ ಅದಕ್ಕೆ ಜವಾಬ್ದಾರಿ ಯಾರು?
 
ಕೊನೆಯದಾಗಿ, 2014 ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರೇ ಒಂದಕ್ಕೆ ಒಂದು ಪೂರಕವಾಗಿದ್ದ ಇಲಾಖೆಗಳನ್ನು ವಿಲೀನಗೊಳಿಸಿ ಹೆಚ್ಚು ಪರಿಣಾಮಕಾರಿ ಸರ್ಕಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು. ಪ್ರತಿಯೊಂದಕ್ಕೂ ಹೈಕಮಾಂಡ್ ನತ್ತ ಮುಖ ಮಾಡುವ ಯಡಿಯೂರಪ್ಪನವರು ಅದರಿಂದಲೂ ಪ್ರೇರಣೆ ಪಡೆದು ಇಲಾಖೆಗಳನ್ನು ವಿಲೀನಗೊಳಿಸಲಿ, minimum government maximum governance ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆಯಲ್ಲವೇ?


-ಶ್ರೀನಿವಾಸ್ ರಾವ್

srinivasrao@kannadaprabha.com

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp