ವಿಧಾನ ಪರಿಷತ್ ಉಪ ಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಆಯ್ಕೆ: 22 ಮತಗಳ ಅಂತರದಿಂದ ಗೆಲುವು
ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಇವರಿಗೆ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ್ದು, ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಬಿಜೆಪಿ ಜೆಡಿಎಸ್ ಗೆ ಬೆಂಬಲ ನೀಡುವುದು ಖಚಿತವಾಗಿದೆ.
Published: 29th January 2021 12:40 PM | Last Updated: 29th January 2021 03:11 PM | A+A A-

ಎಂ.ಕೆ.ಪ್ರಾಣೇಶ್
ಬೆಂಗಳೂರು: ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಇವರಿಗೆ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ್ದು, ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಬಿಜೆಪಿ ಜೆಡಿಎಸ್ ಗೆ ಬೆಂಬಲ ನೀಡುವುದು ಖಚಿತವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೇಲ್ಮನೆಯಲ್ಲಿ ಹೊಂದಾಣಿಕೆ ಸಾಧ್ಯವಾಗಿದ್ದು, ಈ ಮೂಲಕ ಹಲವು ಮಸೂದೆಗಳಿಗೆ ಜೆಡಿಎಸ್ ಬೆಂಬಲ ನೀಡುವ ನಿರೀಕ್ಷೆಯಿದೆ.
ಪಾಣೇಶ್ ಒಟ್ಟು 22 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇಂದು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದಿಂದ ಎಂ.ಕೆ. ಪ್ರಾಣೇಶ್, ಪ್ರತಿಪಕ್ಷ ಕಾಂಗ್ರೆಸ್ ನಿಂದ ಕೆ.ಸಿ. ಕೊಂಡಯ್ಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಶಶಿಲ್ ಜಿ. ನಮೋಶಿ, ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಎಂ.ಕೆ. ಪ್ರಾಣೇಶ್ ಅವರ ಹೆಸರನ್ನು ಪ್ರತ್ಯೇಕವಾಗಿ ಸೂಚಿಸಿದ್ದು, ಇವರ ಹೆಸರನ್ನು ರಘುನಾಥ್ ರಾವ್ ಮಲ್ಕಾಪುರೆ , ಡಾ. ತೇಜಸ್ವಿನಿ ಗೌಡ ಅನುಮೋದಿಸಿದರು.
ಕೆ.ಸಿ. ಕೊಂಡಯ್ಯ ಅವರ ಹೆಸರನ್ನು ಎಸ್.ಆರ್. ಪಾಟೀಲ್, ಅಲಂ ವೀರಭದ್ರಪ್ಪ ಸೂಚಿಸಿದರೆ, ಕಾಂಗ್ರೆಸ್ ನವರಾದ ನಾರಾಯಣಸ್ವಾಮಿ, ಬಿ.ಕೆ. ಹರಿಪ್ರಸಾದ್ ಅನುಮೋದಿಸಿದರು.
ಬಳಿಕ ಎಂ.ಕೆ. ಪ್ರಾಣೇಶ್ ಪರವಾಗಿ ಧ್ವನಿಮತದ ಬೆಂಬಲ ದೊರೆಯಿತು. ಪ್ರತಿಪಕ್ಷ ಕಾಂಗ್ರೆಸ್ ಈ ಪ್ರಸ್ತಾವನೆ ಬಗ್ಗೆ ಮತ ವಿಭಜನೆಗೆ ಬೇಡಿಕೆ ಸಲ್ಲಿಸಿತು. ಆಗ ಎಂ.ಕೆ.ಪ್ರಾಣೇಶ್ ಪರವಾಗಿ 46 ಮತಗಳು, ಹಾಗೂ ಕೆ.ಸಿ. ಕೊಂಡಯ್ಯ ಪರವಾಗಿ 24 ಮತಗಳು ಲಭಿಸಿತು. ನಂತರ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಎಂ.ಕೆ. ಪ್ರಾಣೇಶ್ ಪ್ರಕಟಿಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ನೂತನ ಉಪ ಸಭಾಪತಿಯನ್ನು ಅಭಿನಂದಿಸಿದರು.