ಮುಂದಿನ ಬಾರಿಯೂ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ವಿಪಕ್ಷ ನಾಯಕ ಸಿದ್ದರಾಮಯ್ಯ 

ಮುಂದಿನ ಬಾರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ವಿಪಕ್ಷ ನಾಯಕ ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಮುಂದಿನ ಬಾರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು ಬಾದಾಮಿ ಕ್ಷೇತ್ರದಿಂದ ನೂರಾರು ಕಾರ್ಯಕರ್ತರು ಇಂದು ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಲು ಅವರು ನನ್ನ ಬಳಿ ಬಂದಿದ್ದಾರೆ. ಇಂದು ಅವರ ಮುಂದೆಯೇ ನಾನು ಆಶ್ವಾಸನೆ, ಭರವಸೆಗಳನ್ನು ನೀಡುತ್ತೇನೆ, ಮುಂದಿನ ಬಾರಿ ಕೂಡ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದರು.

ನಾನು ಎಲ್ಲಿ ಕೂಡ ಬಾದಾಮಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿಲ್ಲ, ಅಭಿಮಾನದಿಂದ ಕೊಪ್ಪಳ, ಕೋಲಾರ, ಚಾಮರಾಜಪೇಟೆ ಹೀಗೆ ವಿವಿಧ ಕ್ಷೇತ್ರಗಳಿಂದ ಜನ ಮತ್ತು ಕಾರ್ಯಕರ್ತರು ಕರೆಯುತ್ತಾರೆ. ನಾನು ಎಲ್ಲಿ ಕೂಡ ಚಾಮರಾಜಪೇಟೆ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರಿನಿಂದ ಬಂದವನಿಗೆ ಬಾದಾಮಿ ಕ್ಷೇತ್ರದ ಜನರು ಒಪ್ಪಿಕೊಂಡು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ. ಎಷ್ಟು ಅಂತರದಿಂದ ಗೆಲ್ಲಿಸಿದರು ಎಂಬುದು ಮುಖ್ಯವಲ್ಲ, ಹೊಸಬನಾದರೂ ನನಗೆ ಆ ಕ್ಷೇತ್ರದ ಜನ ಅವಕಾಶ ಕೊಟ್ಟರು. ಬಾದಾಮಿ ಕ್ಷೇತ್ರದ ಜನರು ನನ್ನ ಮೇಲೆ ಅಭಿಮಾನ ಇಟ್ಟುಕೊಂಡಿದ್ದಾರೆ. ಗೆಲ್ಲಿಸಿದ ಅಲ್ಲಿನ ಜನರ ಅಭಿಪ್ರಾಯ ಕೇಳದೆ ಬೇರೆ ಕ್ಷೇತ್ರಕ್ಕೆ ಹೋಗಿ ನಿಲ್ಲುವುದಕ್ಕೆ ಆಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾವು ಗೆಲ್ಲಿಸುತ್ತೇವೆ: ಇಂದು ಬೆಳಗ್ಗೆ ಸಿದ್ದರಾಮಯ್ಯ ನಿವಾಸದ ಬಳಿ ಜಮಾಯಿಸಿದ ಬಾದಾಮಿ ಕ್ಷೇತ್ರದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು, ಸಿದ್ದರಾಮಯ್ಯ ಮತ್ತೊಮ್ಮೆ ಬಾಗಲಕೋಟೆ ಜಿಲ್ಲೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಅಂತ ಒತ್ತಾಯಿಸಿದರು. ನೀವು ಚಾಮರಾಜಪೇಟೆಯತ್ತ ಹೋಗೋದು ಬೇಡ.. ನಾವು 50 ಸಾವಿರ ಲೀಡ್​ನಲ್ಲಿ ಗೆಲ್ಲಿಸುತ್ತೇವೆ ಎಂದು ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com