'ಕನ್ನಂಬಾಡಿ ಕದನ'ಕ್ಕೆ ಹೆಚ್ ಡಿ ಕುಮಾರಸ್ವಾಮಿ ವಿರಾಮ? ಕರ್ನಾಟಕ ಕೇಂದ್ರಿತ ರಾಜಕೀಯ ಮಾಡೋಣ ಎಂದು ಕರೆ!

ಕನ್ನಂಬಾಡಿ ಕದನಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬ್ರೇಕ್ ಹಾಕಲು ನಿರ್ಧರಿಸಿದ್ದಾರಾ ಎಂಬ ಸಂಶಯ ವ್ಯಕ್ತವಾಗಿದೆ. ಅದಕ್ಕೆ ಕಾರಣ ಇದೀಗಷ್ಟೇ ಟ್ವಿಟ್ಟರ್ ಮೂಲಕ ಮಾಡಿರುವ ಟ್ವೀಟ್.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮಂಡ್ಯದ ಕನ್ನಂಬಾಡಿ ಕದನಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬ್ರೇಕ್ ಹಾಕಲು ನಿರ್ಧರಿಸಿದ್ದಾರಾ ಎಂಬ ಸಂಶಯ ವ್ಯಕ್ತವಾಗಿದೆ. ಅದಕ್ಕೆ ಕಾರಣ ಇದೀಗಷ್ಟೇ ಟ್ವಿಟ್ಟರ್ ಮೂಲಕ ಮಾಡಿರುವ ಟ್ವೀಟ್.

ನಿನ್ನೆ ಬೆಂಗಳೂರಿನಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆ ಇನ್ನೂ ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿಲ್ಲ.

ಇದೀಗ ಟ್ವೀಟ್ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಕೋವಿಡ್‌ ಕಾಲದಲ್ಲಿ ಜೆಡಿಎಸ್‌ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂದು ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. 

ಅಂದರೆ ಸಂಸದೆ ಸುಮಲತಾ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ನಿಲ್ಲಿಸುವಂತೆ ಕಾಣುತ್ತಿದೆ. ತಾವು ನೀಡಿರುವ ಹೇಳಿಕೆಗಳು ತಿರುಗುಬಾಣವಾಗುತ್ತಿದೆ ಎಂದು ಕುಮಾರಸ್ವಾಮಿಯವರಿಗೆ ಅರಿವಾದಂತೆ ಕಾಣುತ್ತಿದೆ. 

ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಹೇಳಿದ್ದಾರೆ.

ಕನ್ನಡ,ಕನ್ನಡಿಗ,ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ.ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com