ರಾಜೀನಾಮೆ ವಿಚಾರ ಮುಗಿದ ಅಧ್ಯಾಯ: ರಮೇಶ್ ಜಾರಕಿಹೊಳಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಸದ್ಯ ಅಪ್ರಸ್ತುತ ಮತ್ತು ಮುಗಿದು ಹೋದ ಅಧ್ಯಾಯ ಎಂದು ಹೇಳುವ ಮೂಲಕ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸುವ ಮೂಲಕ ಇದೀಗ ರಾಜೀನಾಮೆ ವಿಚಾರಕ್ಕೆ ಸಂಪೂರ್ಣ ತೆರೆ ಎಳೆದಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಸದ್ಯ ಅಪ್ರಸ್ತುತ ಮತ್ತು ಮುಗಿದು ಹೋದ ಅಧ್ಯಾಯ ಎಂದು ಹೇಳುವ ಮೂಲಕ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸುವ ಮೂಲಕ ಇದೀಗ ರಾಜೀನಾಮೆ ವಿಚಾರಕ್ಕೆ ಸಂಪೂರ್ಣ ತೆರೆ ಎಳೆದಿದ್ದಾರೆ.

ಸಚಿವ ಸ್ಥಾನ ಸಿಗದ್ದಕ್ಕೆ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅವರು ಕೆಲ ದಿನಗಳ ಹಿಂದಷ್ಟೇ ದೆಹಲಿ ಮತ್ತು ಮುಂಬೈಗೆ ತೆರಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. 

ಆ ಸಂದರ್ಭದಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಬಗ್ಗೆ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮಾಡಿದ್ದು ನಿಜ. ಆದರೆ, ನನ್ನ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸದ್ಯ ರಾಜೀನಾಮೆ ವಿಚಾರ ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು. 

ಇನ್ನು ಮಿತ್ರ ಮಂಡಳಿ ಸ್ನೇಹಿತರನ್ನು ಭೇಟಿ ಮಾಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಂಟಿ ಆಗುವ ಪ್ರಶ್ನೆಯೇ ಇಲ್ಲ. ನಾನೇ ಮಿತ್ರ ಮಂಡಳಿ ಸದಸ್ಯರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. 

ಇದೇ ವೇಳೆ ಕೆಆರ್'ಎಸ್ ಅಣೆಕಟ್ಟು ಬಿರುಕು ವಿಚಾರ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವಿನ ಮಾತಿನ ಸಮರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಅಣೆಕಟ್ಟು ಬಿರುಕು ವಿಚಾರ ಸಂಬಂಧ ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯೇ ಅಂತಿಮ. ಸುಮಲತಾ ಅವರು ಈ ರೀತಿಯ ಹೇಳಿಕೆ ಯಾವ ಕಾರಣಕ್ಕೆ ನೀಡುತ್ತಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ. 

ಇದೇ ವೇಳೆ ಬಾಲಚಂದ್ರ ಜಾರಕಿಹೊಳಿಯವರು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಾಲಚಂದ್ರ ಹೇಳಿಕೆ ಕುರಿತು ನನಗೆ ತಿಳಿದಿಲ್ಲ. ನಾನು ಬೆಂಗಳೂರು ಹಾಗೂ ಮುಂಬೈನಲ್ಲಿದ್ದೆ. ಪ್ರಸ್ತುತ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಯಾವುದೇ ಕಾರಣಗಳೂ ಇಲ್ಲ. ಈ ಕುರಿತು ಬಾಲಚಂದ್ರ ಜಾರಕಿಹೊಳಿ ಜೊತೆಗೆ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com