ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಸಿಬಿಗೆ ಉದ್ಯಮಿ ಅಲಂ ಪಾಷಾ ದೂರು

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿರುವುದಾಗಿ ಉದ್ಯಮಿ ಅಲಂ ಪಾಷಾ ತಿಳಿಸಿದ್ದಾರೆ.  
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿರುವುದಾಗಿ ಉದ್ಯಮಿ ಅಲಂ ಪಾಷಾ ತಿಳಿಸಿದ್ದಾರೆ.  

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲಂ ಪಾಷಾ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದಲ್ಲಿ ಮುಗುರೇಶ್ ನಿರಾಣಿ ತಮ್ಮ ಪ್ರಭಾವ ಬಳಸಿ ಅಕ್ರಮ ಎಸಗಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಇವರು ಬೆಳೆ ಸಾಲ ಪಡೆಯುತ್ತಿದ್ದಾರೆ. ಈ ಹಣವನ್ನು ನಕಲಿ ಹೆಸರು, ಖಾತೆಯ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಬ್ಯಾಂಕ್​ ನಲ್ಲಿ ಜಮೆ ಮಾಡಿದ್ದಾರೆ. ರೈತರಿಗೆ ಸಿಗುವ ಶೇ. 4ರ ಬಡ್ಡಿಯ ಕೃಷಿ ಸಾಲವನ್ನು ರೈತರ ನಕಲಿ ಆದಾರ್ ಕಾರ್ಡ್ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂದು ಅಲಂ ಪಾಷ ದೂರಿದ್ದಾರೆ.

ಉತ್ತರ ಕರ್ನಾಟಕ ಭಾಗದ ಅಮಾಯಕ ರೈತರಿಗೆ ಮುರುಗೇಶ್ ನಿರಾಣಿ ವಂಚಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆ ಆಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ ಅಲಂ ಪಾಷಾ ಆರೋಪಕ್ಕೆ ಸ್ಪಷ್ಟನೆ ನೀಡಿರುವ ನಿರಾಣಿ ಅವರ ಮಾಧ್ಯಮ ತಂಡ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸ್ವಯಂ ಘೋಷಿತ ಸಾಮಾಜಿಕ ಕಾರ್ಯಕರ್ತ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರೊಬ್ಬ ನಟೋರಿಯಸ್, ಪಬ್ಲಿಸಿಟಿಗಾಗಿ ರಾಜಕೀಯ ನಾಯಕರುಗಳ ವಿರುದ್ಧ ಆರೋಪ ಮಾಡುತ್ತಿರುತ್ತಾರೆ ಎಂದು ಹೇಳಿದೆ.

ಅಲಂ ಪಾಷಾ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸುಮ್ಮನೆ ಆರೋಪ ಮಾಡಿ ಮಾಧ್ಯಮಗಳ ಮುಂದೆ ನಗೆಪಾಟಲಿಗೀಡಾಗುತ್ತಾರೆ ಎಂದು ಹೇಳಿದೆ.

ಸಾಮಾಜಿಕ ಕಾರ್ಯಕರ್ತನಂತೆ ನಟಿಸುವ ಮೋಸಗಾರ ಅವರು ಎಂದು ಹೇಳಿರುವ ನಿರಾಣಿ ಅವರ ಮಾಧ್ಯಮ ತಂಡ ಅವರ ಆರೋಪಗಳು ಆಧಾರರಹಿತ. ಕಠಿಣ ದಶಕಗಳ ಕಾಲ ಕಠಿಣ ಪರಿಶ್ರಮದಿಂದ ಮುರುಗೇಶ್ ನಿರಾಣಿ ಅವರು ಸಚಿವರಾಗಿದ್ದಾರೆ, ಅವರನ್ನು ಮುಜುಗರಕ್ಕೀಡು ಮಾಡಲು ಸಿಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com