ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ: ಜುಲೈ 26ರ ನಂತರ ರಾಷ್ಟ್ರ ನಾಯಕರ ಸೂಚನೆಯಂತೆ ನಡೆ ಎಂದ 'ರಾಜಾಹುಲಿ'!

ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆ ಮೇರೆಗೆ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

Published: 22nd July 2021 10:52 AM  |   Last Updated: 22nd July 2021 12:44 PM   |  A+A-


B S Yedyurappa

ಬಿ ಎಸ್ ಯಡಿಯೂರಪ್ಪ

Posted By : Sumana Upadhyaya
Source : Online Desk

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆ ಮೇರೆಗೆ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ಜುಲೈ 25ಕ್ಕೆ ಹೈಕಮಾಂಡ್ ನಿಂದ ಸೂಚನೆ ಬರುತ್ತದೆ, ಅದರಂತೆ ನಡೆದುಕೊಳ್ಳುತ್ತೇನೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದಿನ ಎರಡು ವರ್ಷ ಪಕ್ಷಕ್ಕಾಗಿ ಸಾಕಷ್ಟು ದುಡಿದು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.

ಕೇಂದ್ರ ನಾಯಕರಾದ ಅಮಿತ್ ಶಾ, ಜೆ ಪಿ ನಡ್ಡಾ ಅವರು ನನ್ನ ಬಗ್ಗೆ ವಿಶೇಷವಾದ ಪ್ರೀತಿ, ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ನೀಡದಿರುವ ನಿಯಮ ಬಿಜೆಪಿಯಲ್ಲಿದೆ, ಅದರಂತೆ ಯಾರಿಗೂ ಸ್ಥಾನಮಾನ ಕೊಟ್ಟಿಲ್ಲ, ಆದರೆ ನನಗೆ 78 ವರ್ಷವಾದರೂ ಬಿಜೆಪಿಯಲ್ಲಿ ನನ್ನ ಕೆಲಸವನ್ನು ಮೆಚ್ಚಿ ವರಿಷ್ಠರು ನನಗೆ ಎಲ್ಲ ಸ್ಥಾನಮಾನವನ್ನು ಕೊಟ್ಟಿದ್ದಾರೆ.

ಜುಲೈ 26ಕ್ಕೆ ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷಗಳಾಗುತ್ತದೆ. ಮುಂದಿನ ವರ್ಷಗಳಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಮತ್ತು ಸಂಕಲ್ಪ, ಅದೇ ಸಂಕಲ್ಪವನ್ನು ಈಗಲೂ ಮುಂದೆಯೂ ಹೊಂದಿರುತ್ತೇನೆ. ರಾಷ್ಟ್ರೀಯ ನಾಯಕರು ಜುಲೈ 25ಕ್ಕೆ ನೀಡುವ ಸೂಚನೆ ಮೇರೆಗೆ 26ನೇ ತಾರೀಖಿನಿಂದ ನನ್ನ ಕೆಲಸವನ್ನು ಪ್ರಾರಂಭ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜುಲೈ 26ಕ್ಕೆ ವಿಶೇಷ ಕಾರ್ಯಕ್ರಮ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 26ರಂದು ವಿಶೇಷವಾದ ಕಾರ್ಯಕ್ರಮವಿರುತ್ತದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದರು.

ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ಮಾಡಬೇಡಿ: ನನ್ನ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮಠಾಧಿಪತಿಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ನನ್ನ ಜೊತೆ ಸಹಕಾರ ನೀಡಿ ನಿಂತುಕೊಳ್ಳಬೇಕು. ಇವತ್ತಿನಿಂದ ನನ್ನ ಪರವಾಗಿ ಯಾವುದೇ ಪ್ರತಿಭಟನೆ, ಹೇಳಿಕೆಗಳನ್ನು ನೀಡಬೇಡಿ, ಅಂತಹ ಕ್ರಮಗಳೆಲ್ಲ ಸೂಕ್ತವಲ್ಲ, ಆ ರೀತಿ ಮಾಡದೆ ನನ್ನ ಜೊತೆ ಕೆಲಸಗಳಿಗೆ ಪಕ್ಷದ ಒಳಿತಿಗೆ ಮುಂದಿನ ದಿನಗಳಲ್ಲಿ ಸಹಕಾರ ನೀಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಎಲ್ಲ ಜನಾಂಗದ ನೂರಾರು ಮಠಾಧಿಪತಿಗಳು ಬಂದು ನನಗೆ ಆಶೀರ್ವಾದ ಮಾಡಿದ್ದಾರೆ, ಬೆಂಬಲವನ್ನು ಕೂಡ ನೀಡಿದ್ದಾರೆ, ಅಂತವುಗಳನ್ನು ಮರೆಯಲು ಸಾಧ್ಯವಿಲ್ಲ. ಅವರೆಲ್ಲರ ಆಶೀರ್ವಾದದಿಂದ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp