ಸಿಎಂ ಬದಲಾವಣೆ ಪ್ರಹಸನ: ನಾವು ರಾಜೀನಾಮೆ ನೀಡುತ್ತಿಲ್ಲ- ವಲಸಿಗ ಸಚಿವರು
ಸಿಎಂ ಯಡಿಯೂರಪ್ಪ ರಾಜೀನಾಮೆ ಕುರಿತ ಸುದ್ದಿಗಳಿಂದ ಹೆಚ್ಚು ಕಂಗೆಟ್ಟವರೆಂದರೆ ಅದು ಕಾಂಗ್ರೆಸ್-ಜೆಡಿಎಸ್ ನಿಂದ ಬಿಜೆಪಿಗೆ ವಲಸೆ ಬಂದು ಈ ಸರ್ಕಾರದಲ್ಲಿ ಮಂತ್ರಿಗಳಾಗಿರುವವರು.
Published: 22nd July 2021 11:14 PM | Last Updated: 23rd July 2021 12:57 PM | A+A A-

ಸಚಿವ ಸುಧಾಕರ್
ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜೀನಾಮೆ ಕುರಿತ ಸುದ್ದಿಗಳಿಂದ ಹೆಚ್ಚು ಕಂಗೆಟ್ಟವರೆಂದರೆ ಅದು ಕಾಂಗ್ರೆಸ್-ಜೆಡಿಎಸ್ ನಿಂದ ಬಿಜೆಪಿಗೆ ವಲಸೆ ಬಂದು ಈ ಸರ್ಕಾರದಲ್ಲಿ ಮಂತ್ರಿಗಳಾಗಿರುವವರು.
ಸಿಎಂ ನಿರ್ಗಮನದ ಬಗ್ಗೆ ಜು.22 ರಂದು ವ್ಯಾಪಕ ಸುದ್ದಿಯಾದ ಹಿನ್ನೆಲೆಯಲ್ಲಿ ತೀವ್ರ ಆತಂಕಕ್ಕೆ ಒಳಗಾದವರಂತೆ ಕಂಡ ಸಚಿವರು ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಕ್ಯಾಬಿನ್ ಗೆ ತೆರಳಿ 6 ಮಂದಿ ಸಚಿವರು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತ್ತು. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದರೆ ವಲಸಿಗ ಸಚಿವರೂ ರಾಜೀನಾಮೆಗೆ ಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗತೊಡಗಿತು.
ಸಚಿವರ ನಡೆಯನ್ನು ರಾಜೀನಾಮೆ ಪ್ರಹಸನದ ಮೂಲಕ ಸಿಎಂ ಯಡಿಯೂರಪ್ಪ ಅವರೇ ಮುಂದುವರೆಯುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಅಥವಾ ಸಿಎಂ ಬದಲಾವಣೆಯಾದರೆ ತಮ್ಮ ಭವಿಷ್ಯದ ಕಥೆಯೇನು ಎಂಬ ಆತಂಕ ಎಂದು ವಿಶ್ಲೇಷಿಸಲಾಗಿತ್ತು.
ಆದರೆ ಮುಖ್ಯಮಂತ್ರಿಗಳ ಭೇಟಿ ಬಳಿಕ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಸಿಎಂ ಭೇಟಿಗೂ ತಮ್ಮ ರಾಜೀನಾಮೆ ವಿಷಯಕ್ಕೂ ಸಂಬಂಧವಿಲ್ಲ. ನಾವು ನಾಯಕತ್ವದ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
"ನಾವು ಯಾಕೆ ರಾಜೀನಾಮೆ ನೀಡಬೇಕು? ನಾವು ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿ, ಪಕ್ಷದ ಸಿದ್ಧಾಂತ, ತತ್ವಗಳನ್ನು ಒಪ್ಪಿ ಬಿಜೆಪಿಗೆ ಬಂದಿದ್ದೇವೆ, ಹೈಕಮಾಂದ್ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ" ಎಂದು ಸುಧಾಕರ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ನಾನು ಮತ್ತು ಸಹೋದ್ಯೋಗಿಗಳು ಸಹಜವಾಗಿ ಸಿಎಂ ಅವರನ್ನು ಅವರ ಚೇಂಬರ್ ನಲ್ಲಿ ಭೇಟಿ ಮಾಡಿದೆವು, ಮುಖ್ಯಮಂತ್ರಿಗಳ ಬದಲಾವಣೆ ವಿಷಯವಾಗಿ ಪ್ರಕಟವಾಗುತ್ತಿರುವ ವರದಿಗಳ ಬಗ್ಗೆ ಕೇಳಿದೆವು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ "ಜು.25 ರಂದು ಹೈಕಮಾಂಡ್ ನೀಡುವ ನಿರ್ದೇಶನಕ್ಕೆ ಬದ್ಧನಾಗಿರುತ್ತೇನೆ, ಪಕ್ಷವನ್ನು ಒಗ್ಗಟ್ಟಿನಿಂದ ಕಟ್ಟೋಣ ಎಂದಷ್ಟೇ ಹೇಳಿದ್ದಾರೆಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಇಲ್ಲದೇ ಇದ್ದಲ್ಲಿ ತಮ್ಮ ಸ್ಥಿತಿ ಏನಾಗಬಹುದೆಂಬ ಚಿಂತೆ ವಲಸಿಗ ಸಚಿವರನ್ನು ಕಾಡುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಸುಧಾಕರ್, ಸಿಎಂ ಯಡಿಯೂರಪ್ಪ ಅವರೊಂದಿಗೆ ಸುದೀರ್ಘವಾಗಿ ಕೆಲಸ ಮಾಡಿದ್ದೇವೆ, ಅವರು ಪದವಿಯಲ್ಲಿರುವವರೆಗೂ ಅವರೊಂದಿಗೆ ನಿಲ್ಲುವುದು ಮಾನವಿಯತೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋಗುತ್ತೀರಾ? ಎಂಬ ಪ್ರಶ್ನೆಗೂ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಬಂದಲ್ಲಿ ಹೋಗುವುದಾಗಿ ತಿಳಿಸಿದ್ದಾರೆ.