ದಲಿತರಿಗೆ ಸಿಎಂ ಸ್ಥಾನ ನೀಡಿ: ಬಿಜೆಪಿಗೆ ಸವಾಲು ಹಾಕಿದ ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕರ್ನಾಟಕದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ, ಈಗೊಂದು ಅವಕಾಶ ಸಿಕ್ಕಿದೆ. ಸೀಟು ಖಾಲಿ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ. 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಿದ್ದರಾಮಯ್ಯ
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಿದ್ದರಾಮಯ್ಯ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕರ್ನಾಟಕದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ, ಈಗೊಂದು ಅವಕಾಶ ಸಿಕ್ಕಿದೆ. ಸೀಟು ಖಾಲಿ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂದು ಗೊತ್ತಿಲ್ಲ. ಆದರೆ, ಯಡಿಯೂರಪ್ಪ ಅವರನ್ನು ಬದಲಾಯಿಸುತ್ತಾರೆ. ಆ ಪಕ್ಷ ಎಷ್ಟು ಬೇಗ ತೊಲಗುತ್ತೋ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಾನು ಹೇಳಿದ್ದೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿತ್ತು. ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೊಂದು ಸವಾಲು ಹಾಕಿದ್ದಾರೆ. ನಮ್ಮಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿ ಆಗಿದ್ದಾರೆ. ಈಗ ಬಿಜೆಪಿಯವರಿಗೆ ಅವಕಾಶ ಬಂದಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 

ದಲಿತರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕಾಳಜಿ ಇದ್ದರೆ ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ದಲಿತ ಸಮುದಾಯಕ್ಕೆ ಸೇರಿದವರು ಎಂಬುದನ್ನು ಈಗಲೇ ಘೋಷಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.

ದಲಿತನೊಬ್ಬ ಮುಖ್ಯಮಂತ್ರಿ ಆಗಬಾರದು ಎಂದು ಜಿ.ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಸಿದ್ದರಾಮಯ್ಯ ಈಗ ದಲಿತರ ಬಗ್ಗೆ ಪ್ರೇಮ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ಕುಟುಂಬ ರಾಜಕಾರಣದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ವ್ಯಂಗ್ಯವಾಡಿದೆ.

ತಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವಲ್ಲಿ ತರಾತುರಿಯಲ್ಲಿರುವ ಸಿದ್ದರಾಮಯ್ಯ ಅವರು ದಲಿತ ವ್ಯಕ್ತಿಯನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲು ಹೇಗೆ ಸಾಧ್ಯ ಎಂದು ಇದೇ ವೇಳೆ ಪ್ರಶ್ನಿಸಿದೆ.

ಈ ನಡುವೆ ಸಿದ್ದರಾಮಯ್ಯ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜಕೀಯ ತಜ್ಞರು, ಸಿದ್ದರಾಮಯ್ಯ ಹೇಳಿಕೆ ಮುಂದುವ ಚುನಾವಣೆ ವೇಳೆ ಮತಗಳನ್ನು ವಿಭಿಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. 

ರಾಜಕೀಯ ತಜ್ಞ ಪ್ರೊ.ಮುಜಾಫರ್ ಅಸ್ಸಾದಿಯವರು ಮಾತನಾಡಿ, ಇಂತಹ ಹೇಳಿಕೆಗಳು ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಯಡಿಯೂರಪ್ಪ ಸ್ಥಾನಕ್ಕೆ ಯಾರನ್ನು ತರಬೇಕು ಎಂಬುದನ್ನು ಈಗಾಗಲೇ ಬಿಜೆಪಿ ನಿರ್ಧರಿಸಿದೆ. ಸಿದ್ದರಾಮಯ್ಯ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಯತ್ನಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಕಾಂಗ್ರೆಸ್ ಅಥವಾ ಬಿಜೆಪಿಯ ದಲಿತರು ಮುಖ್ಯಮಂತ್ರಿಯಾಗುವ ಯಾವುದೇ ಅವಕಾಶಗಳೂ ಇಲ್ಲ. ಮುಂದಿನ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಶಕ್ತಿ ಕಡಿಮೆಯಾಗಿದ್ದೇ ಆದರೆ, ಖರ್ಗೆ ಮುಖ್ಯಮಂತ್ರಿ ರೇಸ್ ನಲ್ಲಿ ಬರಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com