'ಮುಂದಿನ ಸಿಎಂ ಬಗ್ಗೆ ನನಗೆ ಯಾರೂ ಹೇಳಿಲ್ಲ, ನಿಮಗೆ ಹೇಳಿದ್ದಾರೆಯೇ': ನಗುತ್ತಾ ಪ್ರಶ್ನೆ ಕೇಳಿದ ಪ್ರಹ್ಲಾದ್ ಜೋಷಿ
ಮುಂದಿನ ಸಿಎಂ ಬಗ್ಗೆ ನನ್ನಲ್ಲಿ ಯಾರೂ ಚರ್ಚೆ ನಡೆಸಿಲ್ಲ, ಆ ವಿಷಯ ನನಗೆ ಗೊತ್ತೂ ಇಲ್ಲ, ಮಾಧ್ಯಮಗಳಲ್ಲಿ ಬರುವ ಚರ್ಚೆಗಳಷ್ಟೇ ನನಗೆ ಗೊತ್ತು, ವರಿಷ್ಠರೂ ನನಗೆ ಏನೂ ಹೇಳಿಲ್ಲ, ಈ ಬಗ್ಗೆ ಪ್ರಧಾನಿ ಮೋದಿಯವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪ್ರಹ್ಲಾದ್ ಜೋಷಿ ಪ್ರತಿಕ್ರಿಯೆ ನೀಡಿದ್ದಾರೆ.
Published: 24th July 2021 03:29 PM | Last Updated: 24th July 2021 03:32 PM | A+A A-

ಧಾರವಾಡಕ್ಕೆ ತೆರಳುವ ಮಧ್ಯೆ ನವಲೂರ ಪೇರಳೆ ಹಣ್ಣು ಸವಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
ಬೆಳಗಾವಿ: ಮುಂದಿನ ಸಿಎಂ ಬಗ್ಗೆ ನನ್ನಲ್ಲಿ ಯಾರೂ ಚರ್ಚೆ ನಡೆಸಿಲ್ಲ, ಆ ವಿಷಯ ನನಗೆ ಗೊತ್ತೂ ಇಲ್ಲ, ಮಾಧ್ಯಮಗಳಲ್ಲಿ ಬರುವ ಚರ್ಚೆಗಳಷ್ಟೇ ನನಗೆ ಗೊತ್ತು, ವರಿಷ್ಠರೂ ನನಗೆ ಏನೂ ಹೇಳಿಲ್ಲ, ಈ ಬಗ್ಗೆ ಪ್ರಧಾನಿ ಮೋದಿಯವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಕರ್ನಾಟಕದ ಮುಂದಿನ ಸಿಎಂ ಎಂದು ಬಿಂಬಿತವಾಗಿರುವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಇಂದು ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ನಕ್ಕು ಸುಮ್ಮನಾದರು,ಮುಂದಿನ ಸಿಎಂ ನೀವೇ ಅಂತೆ, ನಿಮ್ಮ ಹೆಸರು ಜೋರಾಗಿ ಕೇಳಿಬರುತ್ತಿದೆಯಲ್ಲವೇ ಎಂದಾಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ, ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ. ಯಡಿಯೂರಪ್ಪನವರು ಮತ್ತು ಕೇಂದ್ರ ನಾಯಕರ ಮಧ್ಯೆ ಏನು ಚರ್ಚೆ ನಡೆದಿದೆಯೋ ನನಗೆ ಗೊತ್ತಿಲ್ಲ, ಅವರಿಗೆ ರಾಜೀನಾಮೆ ಕೊಡಲು ಹೇಳಿದ್ದಾರೆಯೇ ಎಂದು ಕೂಡ ನನಗೆ ಗೊತ್ತಿಲ್ಲ, ಮೋದಿಯವರು ನನಗೇನು ಹೇಳಿಲ್ಲ, ನಿಮಗೆ ಹೇಳಿದ್ದಾರಾ ಎಂದು ಗುಟ್ಟು ಬಿಟ್ಟು ಕೊಡದ ರೀತಿಯಲ್ಲಿ ನಗುತ್ತಾ ಮಾಧ್ಯಮ ಪ್ರತಿನಿಧಿಗಳಲ್ಲಿ ಪ್ರಶ್ನೆ ಕೇಳಿದರು.
ಯಡಿಯೂರಪ್ಪನವರು ಮತ್ತು ಕೇಂದ್ರ ನಾಯಕರ ಮಧ್ಯೆ ನಡೆದ ಮಾತುಕತೆ ಬಗ್ಗೆ ಅವರು ಹೇಳಿದ್ದಾರೆ, ಆ ಬಗ್ಗೆ ಮಾತನಾಡಲು ನಾನು ಅಧಿಕೃತ ವ್ಯಕ್ತಿಯಲ್ಲ, ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಿದ್ದಾರಷ್ಟೆ ಎಂದರು.