ವಲಸಿಗ ಸಚಿವರಿಗೆ ಯಾವುದೇ ರೀತಿಯ ಬೆದರಿಕೆಗಳಿಲ್ಲ: ಮುರುಗೇಶ್ ನಿರಾಣಿ
ಕಾಂಗ್ರೆಸ್-ಜೆಡಿಎಸ್ ಪಕ್ಷ ತೊರೆದು 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಾಯಕರಿಗೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾವುದೇ ರೀತಿಯ ಬೆದರಿಕೆಗಳೂ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿಯವರು ಹೇಳಿದ್ದಾರೆ.
Published: 25th July 2021 07:40 AM | Last Updated: 25th July 2021 07:40 AM | A+A A-

ಮುರುಗೇಶ್ ನಿರಾಣಿ
ಕಲಬುರಗಿ: ಕಾಂಗ್ರೆಸ್-ಜೆಡಿಎಸ್ ಪಕ್ಷ ತೊರೆದು 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಾಯಕರಿಗೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾವುದೇ ರೀತಿಯ ಬೆದರಿಕೆಗಳೂ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿಯವರು ಹೇಳಿದ್ದಾರೆ.
ಕಲುಬುರಗಿಯಲ್ಲಿ ನಾಯಕತ್ವ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ದಿನಪತ್ರಿಕೆಗಳಲ್ಲಿ ನೋಡಿದ ಬಳಿಕವೇ ನನಗೆ ತಿಳಿದಿದ್ದು. ಯಡಿಯೂರಪ್ಪ ಸೇರಿ ಪಕ್ಷದ ಯಾವುದೇ ನಾಯಕರೂ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ನೀವೂ ಇದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ. ಸ್ಥಾನಮಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ವಾರಣಾಸಿಯ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಭೇಟಿ ಕುರಿತು ಮಾತನಾಡಿದ ಅವರು, ಈ ಕುರಿತು ಯಾರೊಬ್ಬರೂ ಯಾವುದೇ ರೀತಿಯ ಅರ್ಥ ಕಲ್ಪಿಸುವುದು ಬೇಡ. ನಾನು ಚಿಕ್ಕನಿಂದಲೂ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ಈಗಲೂ ಅಷ್ಟೆ. ಸಾಮಾನ್ಯವಾಗಿ ತಿಂಗಳು – ಎರಡು ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಅದರಂತೆಯೇ ನಾನು ವಾರಣಾಸಿಗೆ ಹೋಗಿದ್ದೆ. ಇದಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.