ಬಿಎಸ್'ವೈ ಪದತ್ಯಾಗ: ಕಳೆದುಕೊಂಡಿದ್ದ ಲಿಂಗಾಯತ ಬೆಂಬಲ ಮರಳಿ ಗಳಿಸಲು ಕಾಂಗ್ರೆಸ್ ತಂತ್ರ!

ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ರಾಜೀನಾಮೆಗೆ ಕಾರಣಕರ್ತರಾಗಿರುವ ಬಿಜೆಪಿ ಹೈಕಮಾಂಡ್ ಇದೀಗ ಲಿಂಗಾಯತ ಸಮುದಾಯನ್ನು ಎದುರು ಹಾಕಿಕೊಂಡಂತಾಗಿದೆ ಎಂಬ ವ್ಯಾಖ್ಯಾನಗಳು ಶುರುವಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ರಾಜೀನಾಮೆಗೆ ಕಾರಣಕರ್ತರಾಗಿರುವ ಬಿಜೆಪಿ ಹೈಕಮಾಂಡ್ ಇದೀಗ ಲಿಂಗಾಯತ ಸಮುದಾಯನ್ನು ಎದುರು ಹಾಕಿಕೊಂಡಂತಾಗಿದೆ ಎಂಬ ವ್ಯಾಖ್ಯಾನಗಳು ಶುರುವಾಗಿವೆ. 

ಈ ಪರಿಸ್ಥಿತಿಯನ್ನೇ ಇದೀಗ ತಮ್ಮ ಲಾಭವನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಕಳೆದುಕೊಂಡಿದ್ದ ಲಿಂಗಾಯ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ತಂತ್ರಗಳನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ. 

ಬಿಜೆಪಿ ಹೈಕಮಾಂಡ್ ಅಸಾಂಪ್ರದಾಯಕ ರೀತಿಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿದೆ ಎಂದು ದೊಡ್ಡ ಧ್ವನಿಯಲ್ಲಿ ಬಿಂಬಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಷ್ಟು ದಿನ ರಾಜ್ಯ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಪದಚ್ಯುತಿಗೊಳಿಸಿದ ರೀತಿ ಬಗ್ಗೆ ಅನುಕಂಪದ ಮಾತುಗಳನ್ನಾಡಲು ಶುರು ಮಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಆಡಳಿತ ನಡೆಸಲು ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ನಾಯಕರೇ ಬಿಡಲಿಲ್ಲ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿರುವ ರೀತಿಯು ಇದೀಗ ಹಲವರಿಗೆ ವೀರೇಂದ್ರ ಪಾಟೀಲ್ ಅವರ ಪರಿಸ್ಥಿತಿ ನೆನಪಿಗೆ ಬರುವಂತೆ ಮಾಡಿದೆ.

ವಿರೇಂದ್ರ ಪಾಟೀಲರು ದಕ್ಷ ಆಡಳಿತಕ್ಕೆ ಹೆಸರಾದವರು. ಕಾಂಗ್ರೆಸ್ ಪಕ್ಷದಲ್ಲಿ 1968 ರಿಂದ 1971 ರವರೆಗೆ ಮುಖ್ಯಮಂತ್ರಿಯಾಗಿದ್ದವರು. ನಂತರ 18 ವರ್ಷಗಳ ಬಳಿಕ ಅಂದರೆ ತನ್ನ 66ನೇ ವಯಸ್ಸಿಗೆ(1989-1990) ಒಂದು ವರ್ಷದ ಕಾಲ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಿದವರು. ಆದರೆ ಸಿಎಂ ಗಾದಿಯನ್ನು ವಯಸ್ಸು ಹಾಗೂ ವಯೋಸಹಜ ಅನಾರೋಗ್ಯದ ಕಾರಣಕ್ಕಾಗಿ ಕಳೆದುಕೊಳ್ಳಬೇಕಾಯಿತು.

ವಿರೇಂದ್ರ ಪಾಟೀಲರಿಗೆ ವಯೋಸಹಜ ಅನಾರೋಗ್ಯ ಕಾಡಿದರೂ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರಬೇಕಾಗಿ ಬಂದಿತ್ತು. ಪಾರ್ಶ್ವವಾಯು ಹೊಡೆತಕ್ಕೆ ಸಿಲುಕಿ ಹಾಸಿಗೆ ಹಿಡಿಯಬೇಕಾಗಿ ಬಂತು. ಹೀಗಿದ್ದರೂ ಅವರು ಸಿಎಂ ಆಗಿ ಮುಂದುವರಿದಿದ್ದರು. ಇವರ ಆರೋಗ್ಯ ವಿಚಾರಿಸಲು ಬಂದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಮನೆಗೆ ತೆರಳಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಬಳಿಕ ಹೊರಗೆ ಬಂದು ಕರ್ನಾಟಕ ಬೇರೆ ಮುಖ್ಯಮಂತ್ರಿಯನ್ನು ಕಾಣಲಿದೆ ಎಂದು ಹೇಳಿದ್ದರು. ಒಂದು ಅರ್ಥದಲ್ಲಿ ರಾಜೀವ್ ಗಾಂಧಿಯವರು ವಿರೇಂದ್ರ ಪಾಟೀಲರನ್ನು ವಜಾ ಮಾಡಿದರು ಎಂದೇ ಚರ್ಚೆಗೆ ಗ್ರಾಸವಾಯಿತು.

ಇದೀಗ ಬಿಎಸ್‌ ಯಡಿಯೂರಪ್ಪ ಅವರ ಸಿಎಂ ಸ್ಥಾನ ಕಳೆದುಕೊಂಡಿರುವುದೂ ಕೂಡ ಇದೇ ಸಂದರ್ಭವನ್ನು ನೆನಪಿಸುತ್ತಿದೆ. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದರೆ ಬಿಎಸ್‌ವೈ 75 ದಾಟಿದರು ಅವಕಾಶ ನೀಡಲಾಗಿತ್ತು. ಯಡಿಯೂರಪ್ಪನವರಿಗೆ ವಯಸ್ಸು ಒಂದು ಕಾರಣವಾದರೂ ಅವರು ಆರೋಗ್ಯವಂತರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಚುರುಕಾಗಿಯೇ ಸರ್ಕಾರದ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಆದರೂ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿರುವುದು ಇದೀಗ ವೀರಶೈವ-ಲಿಂಗಾಯತ ಸಮುದಾಯದ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ ನಾಯಕ ಅನಿಲ್ ಕುಮಾರ್ ಟಿ ಅವರು ಮಾತನಾಡಿ, ಯಡಿಯೂರಪ್ಪರಿಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಲ್ಲಿ ಇತರz ಲಿಂಗಾಯತ ನಾಯಕರು ಇದ್ದಾರೆ. ಆದರೆ, ಯಾರಿಗೂ ಯಡಿಯೂರಪ್ಪ ಅವರಷ್ಟು ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ. 

ಲಿಂಗಾಯತ ಆಕ್ರೋಶವನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳಬಾರದು. 2013ರಲ್ಲಿ ಯಡಿಯೂರಪ್ಪ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಪಕ್ಷವನ್ನು ಸ್ಥಾಪನೆ ಮಾಡಿದಾಗ ಬಿಜೆಪಿ ಸೋಲನ್ನು ಎದುರಿಸಿತ್ತು. ಯಡಿಯೂರಪ್ಪ ಇಲ್ಲದೆ, ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವುದು ಕಠಿಣವಾಗಲಿದ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಮಾತನಾಡಿ, ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವ ಮೂಲಗ ಬಿಜೆಪಿ ಪ್ರಜಾಪ್ರಭುತ್ವವನ್ನು ಒಪ್ಪುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆ, ಪ್ರವಾಹ ಹಾಗೂ ಇತರೆ ಪರಿಸ್ಥಿತಿ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿರುವುದು ಕಾಂಗ್ರೆಸ್'ಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com