ಗೌವರ್ನರ್ ಆಗಲ್ಲ, ಯಾವುದೇ ಹುದ್ದೆಯನ್ನೂ ಸ್ವೀಕರಿಸಲ್ಲ: ಮಾರ್ಗದರ್ಶಕ ಮಂಡಳಿಗೆ ಹೋಗಲ್ಲವೆಂದು ಸ್ಪಷ್ಟಪಡಿಸಿದ ಬಿಎಸ್'ವೈ
ನಾನು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘಂಟಾಘೋಷವಾಗಿ ಸಾರಿರುವ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇನ್ನು ಮುಂದೆ ಯಾವುದೇ ಸ್ಥಾನಮಾನ ಸ್ವೀಕರಿಸುವುದೂ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಈ ಮೂಲಕ ಮಾರ್ಗದರ್ಶ ಮಂಡಳಿಗೆ ಹೋಗಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
Published: 27th July 2021 07:15 AM | Last Updated: 27th July 2021 02:15 PM | A+A A-

ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ನಾನು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘಂಟಾಘೋಷವಾಗಿ ಸಾರಿರುವ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇನ್ನು ಮುಂದೆ ಯಾವುದೇ ಸ್ಥಾನಮಾನ ಸ್ವೀಕರಿಸುವುದೂ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಈ ಮೂಲಕ ಮಾರ್ಗದರ್ಶ ಮಂಡಳಿಗೆ ಹೋಗಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಿನ್ನೆಗೆ ಎರಡು ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್'ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು, ನನಗೆ ರಾಜ್ಯಪಾಲ ಹುದ್ದೆ ನೀಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಕರ್ನಾಟಕದಲ್ಲಿ ಪಕ್ಷ ಬಲಪಡಿಸಲು ಕೆಲಸ ಮಾಡುತ್ತೇನೆ ಎನ್ನುವ ಮಾತನ್ನು ನಾನು ರಾಜ್ಯ ಜನರಿಗೆ ಕೊಡುತ್ತೇನೆಂದು ಹೇಳಿದರು.
ಈ ಹಿಂದೆ ನನಗೆ ಕೇಂದ್ರಕ್ಕೆ ಬಂದು ಸಚಿವರಾಗಿ ಎಂದು ಅಟರ್ ಬಿಹಾರಿ ವಾಜಪೇಯಿ ಕರೆದಿದ್ದರು. ಆಗ ಅವರಿಗೆ ಸಚಿವ ಸ್ಥಾನ ನನಗೆ ಬೇಡ. ರಾಜ್ಯದಲ್ಲಿ ಪಕ್ಷ ಕಟ್ಟಲು ಅವಕಾಶ ಕೊಡಬೇಕು ಎಂದು ಹೇಳಿದ್ದೆ, ಹೀಗಿರುವಾಗ ಈಗ ಯಾವುದೇ ಸ್ಥಾನಮಾನ ಪಡೆಯುವ ಮಾತೇ ಇಲ್ಲ ಎಂದು ತಿಳಿಸಿದರು. ಈ ಮೂಲಕ ಬಿಜೆಪಿ ಮಾರ್ಗದರ್ಶಕ ಮಂಡಳಿಗೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಮಾರ್ಗದರ್ಶ ಮಂಡಳಿ ಎಂಬುದು ಬಿಜೆಪಿಯಲ್ಲಿ ವೃದ್ಧಾಶ್ರಮ ಇದ್ದಂತೆ. 75 ವರ್ಷ ತುಂಬಿದ ಪಕ್ಷದ ನಾಯಕರನ್ನು ಈ ಮಂಡಳಿಗೆ ಸೇರ್ಪಡೆಗೊಳಿಸಲಾಗುತ್ತದೆ.
ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ ಅವರು ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಅವರನ್ನು ರಾಜ್ಯಪಾಲರ ಹುದ್ದೆಯಲ್ಲಿ ನೋಡಲು ಬಿಜೆಪಿ ಹೈಕಮಾಂಡ್ ಇಚ್ಛಿಸುತ್ತಿದೆ. ಆದರೆ, ಯಡಿಯೂರಪ್ಪ ಅವರು ಅದನ್ನು ನಿರಾಕರಿಸಿದ್ದಾರೆಂದು ಹೇಳಿದ್ದಾರೆ.
ನೂತನ ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಹೊರ ಹೋಗುವ ನಾಯಕರನ್ನು ಬಿಜೆಪಿ ಯಾವ ರೀತಿ ನಿಭಾಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿನ ಪ್ರಸ್ತುತದ ಪರಿಸ್ಥಿತಿ ಇದೀಗ ಬಿಜೆಪಿಗೆ ಹಗ್ಗದ ಮೇಲಿನ ನಡಿಗೆಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಯಡಿಯೂರಪ್ಪ ಅವರು ಸಹಾಯ ಮಾಡಬಹುದು. ಆದರೆ, ಅಲ್ಲಿಯವರೆಗೆ ಪಕ್ಷದಲ್ಲಿ ಯಾವುದೇ ರೀತಿಯ ಬಿರುಕು ಬೀಳದಂತೆ ನೋಡಿಕೊಳ್ಳುವುದು ನಿಜವಾದ ಸವಾಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.