ರಾಜ್ಯ ಸಚಿವ ಸಂಪುಟ ರಚನೆ: ಹೈಕಮಾಂಡ್ ಆದೇಶಕ್ಕೆ ಕಾದು ಕುಳಿತಿರುವ ಸಿಎಂ ಬೊಮ್ಮಾಯಿ

ಬಿಜೆಪಿಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕೂಡ ಪ್ರಮಾಣ ಸ್ವೀಕರಿಸಿದ್ದಾಗಿದೆ. ಈಗ ಅವರ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಇನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. 
ಮಾಜಿ ಸಿಎಂ ಯಡಿಯೂರಪ್ಪ ಜೊತೆಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಕುಟುಂಬ
ಮಾಜಿ ಸಿಎಂ ಯಡಿಯೂರಪ್ಪ ಜೊತೆಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಕುಟುಂಬ

ಬೆಂಗಳೂರು: ಬಿಜೆಪಿಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕೂಡ ಪ್ರಮಾಣ ಸ್ವೀಕರಿಸಿದ್ದಾಗಿದೆ. ಈಗ ಅವರ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಇನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. 

ಯಡಿಯೂರಪ್ಪ ಅವರ ಸಂಪುಟದಲ್ಲಿ 33 ಮಂದಿ ಸಚಿವರಿದ್ದರು. ಇದೀಗ ಹೊಸ ಸಂಪುಟ ರಚನೆ ಮಾಡುವ ಅವಕಾಶ ಬೊಮ್ಮಾಯಿಯವರಿಗೆ ಸಿಕ್ಕಿದೆ. ಸಂಪುಟ ರಚನೆ ಮಾಡಲು ತುದಿಗಾಲಲ್ಲಿ ನಿಂತಿರುವ ಬೊಮ್ಮಾಯಿಯವರು ಬಿಜೆಪಿ ಹೈಕಮಾಂಡ್ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. 

ಸಂಪುಟ ರಚನೆ ಕುರಿತು ಈವರೆಗೂ ಯಾವುದೇ ರೀತಿಯ ಚರ್ಚೆಗಳನ್ನೂ ನಡೆಸಿಲ್ಲ. ನಮ್ಮ ಹಿರಿಯ ನಾಯಕರು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆಂದು ಬೊಮ್ಮಾಯಿಯವರು ಹೇಳಿದ್ದಾರೆ. 

ಈ ನಡುವೆ ಈ ಬಾರಿ ಶ್ರೀರಾಮುಲು, ಗೋವಿಂದ ಕಾರಜೋಳ ಹಾಗೂ ಆರ್.ಅಶೋಕ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಬೊಮ್ಮಾಯಿಯವರು ಮಾತ್ರ ಯಾವುದೇ ರೀತಿಯ ಮಾಹಿತಿಗಳನ್ನೂ ನೀಡಿಲ್ಲ. 

ಇದಲ್ಲದೆ, ಸಚಿವ ಸಂಪುಟದಲ್ಲಿ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಕೆ.ಎಸ್.ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ವರದಿಗಳ ಬೆನ್ನಲ್ಲೇ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಶೆಟ್ಟರ್ ಅವರು ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಹೊಸ ಸಂಪುಟದಲ್ಲಿ ಪಕ್ಷ ನಿಷ್ಠರು ಮತ್ತು ಯುವ ಮುಖಗಳಿಗೆ ಮಣೆ ಹಾಕಲು ವರಿಷ್ಠರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆ ಇದೀಗ ಕಾಂಗ್ರೆಸ್-ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಾಯಕರಲ್ಲಿ ಆಂತಕವನ್ನು ಹುಟ್ಟುಹಾಕಿದೆ. 

ಇನ್ನು ಸಿಎಂ ಬೊಮ್ಮಾಯಿಯವರ ಜೊತೆಗೆ ಮಂಗಳವಾರ ಸಂಜೆಯಿಂದಲೂ ಡಾ.ಕೆ.ಸುಧಾಕರ್ ಅವರು ಇದ್ದು, ಸುಧಾಕರ್ ಅವರಿಗೆ ಬೊಮ್ಮಾಯಿ ಪ್ರಮುಖ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಬೊಮ್ಮಾಯಿಯವರು ಜುಲೈ.30 ರಂದು ದೆಹಲಿಗೆ ಭೇಟಿ ನೀಡಲಿದ್ದು, ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆಯೇ ಸಂಪುಟ ರಚನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳುವಂತೆ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪ ಅವರು, ವಲಸಿಗೆ ನಾಯಕರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ನಡೆಯುವಂತೆ ಮಾಡಿದ್ದರು. ಇದೀಗ ಬೊಮ್ಮಾಯಿಯವರು ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ. 

ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬೊಮ್ಮಾಯಿಯವರು, ದಲಿತ, ಹಿಂದುಳಿದ, ಬಡವರು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಮತ್ತು ಸರ್ಕಾರದ ಮಾರ್ಗದರ್ಶಕರು, ಅವರು ನೀಡಿದ ಜನಪ ಯೋಜನೆಗಳು ಮತ್ತು ರೀತಿ-ನೀತಿ ಮುಂದುವರೆಸುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಅಧಿಕಾರ ಒಂದೇ ಕಡೆ ಕೇಂದ್ರಕೃತವಾಗಿರುವುದಿಲ್ಲ. ಬದಲಿಗೆ ನನ್ನೊಂದಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವೂ ಇದೆ. ಎಲ್ಲರೂ ಒಂದು ತಂಡವಾಗಿ ಕೆಲಸ ನಿರ್ವಹಿಸಲಿವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com