ದೆಹಲಿಯಲ್ಲಿ ಜೆಪಿ ನಡ್ಡಾ- ವಿಜಯೇಂದ್ರ ಭೇಟಿ: ಸಚಿವ ಯೋಗೇಶ್ವರ್ ಗೆ ಕೊಕ್ ? ಸಂಪುಟ ಪುನಾರಚನೆ ಬಗ್ಗೆ ಸಿಎಂ ಹೇಳಿದ್ದೇನು?

ಕಳೆದ ಕೆಲವು ದಿನಗಳಿಂದ ಸಂಪುಟ ಪುನಾರಚನೆಯಾಗುತ್ತದೆ ಎಂಬ ಗುಸುಗುಸು ಸುದ್ದಿಗಳು ಕೇಳಿ ಬಂದಿದ್ದವು, ಈ ಎಲ್ಲಾ ವಿಷಯಗಳಿಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಜೆಪಿ ನಡ್ಡಾ ಭೇಟಿಯಾದ ವಿಜಯೇಂದ್ರ
ಜೆಪಿ ನಡ್ಡಾ ಭೇಟಿಯಾದ ವಿಜಯೇಂದ್ರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಂಪುಟ ಪುನಾರಚನೆಯಾಗುತ್ತದೆ ಎಂಬ ಗುಸುಗುಸು ಸುದ್ದಿಗಳು ಕೇಳಿ ಬಂದಿದ್ದವು, ಈ ಎಲ್ಲಾ ವಿಷಯಗಳಿಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ  ಮಾತನಾಡಿದ ಯಡಿಯೂರಪ್ಪ, ಸಂಪುಟ ಪುನಾರಚನೆ ಮಾಡುವ ಯಾವ ಪ್ರಕ್ರಿಯೆಯೂ ಇಲ್ಲ. ಎಲ್ಲವೂ ಊಹಾಪೋಹಗಳಷ್ಟೇ ಎಂದು ಹೇಳಿದ್ದಾರೆ. ಸಚಿವ ಸಿಪಿ ಯೋಗೇಶ್ವರ್ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರಿಗೆ ಸಿಎಂ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆಂಬ ಸುದ್ದಿಗಳು ಹರಿದಾಡಿದ್ದವು.

ಸಂಪುಟ ಪುನಾರಚನೆ ವಿಚಾರ ನಮ್ಮ ಮುಂದೆ ಇಲ್ಲ, ಯಾವುದೇ ರೀತಿಯ ಯೋಚನೆಗಳು ನಮ್ಮ ಕಣ್ಣ ಮುಂದೆ ಇಲ್ಲ. ಕೇಂದ್ರ ವರಿಷ್ಠರೂ ಈವರೆಗೆ ಯಾವುದೇ ಸೂಚನೆ ಕೊಟ್ಟಿಲ್ಲ, ಎಂದು ಮಾಹಿತಿ ನೀಡಿದರು. ಕೇಂದ್ರದ ನಾಯಕರು ಸೂಚನೆ ಕೊಟ್ಟರೆ ಅವರು ಹೇಳಿದಂತೆ ನಾವು ಮಾಡುತ್ತೇವೆ ಎಂದರು.

ಭಾನುವಾರ ಸುಮಾರು 20 ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಊಹಾಪೋಹಗಳಿಗೆ ಕಾರಣವಾಗಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಾರ್ವಜನಿಕವಾಗಿ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದರು. ಹಾಗೂ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಒತ್ತಾಯಿಸಿದ್ದರು.

ಇದಾದ ನಂತರ ಸಚಿವ ಸ್ಥಾನದಿಂದ ಕಿತ್ತೊಗೆಯಬಹುದೆಂಬ ಭಯದಿಂದ ಸಚಿವ ಸಿಪಿ ಯೋಗೇಶ್ವರ್ ಒಕ್ಕಲಿಗ ಮಠಕ್ಕೆ ತೆರಳಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಮೂಲಗಳ ಪ್ರಕಾರ ಬದಲಾವಣೆ ತರಲು ಹಲವು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಇದೆಲ್ಲದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರನ್ನು ಹೊಸದಿಲ್ಲಿಯಲ್ಲಿ ಗುರುವಾರ ಭೇಟಿಯಾದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಮಾತುಕತೆ ನಡೆಸಿದ್ದು, ಈ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.

ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದು, ಈ ವೇಳೆ ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನ ನಡ್ಡಾ ಅವರ ಗಮನಕ್ಕೆ ತಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಬಿಜೆಪಿಯ ಕೆಲವು ನಾಯಕರು ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಬಗ್ಗೆ ನಡ್ಡಾ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.​

ಮೂಲಗಳ ಪ್ರಕಾರ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಡ್ರಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಯೋಗೇಶ್ವರ್ ಹೇಳಿಕೆ, ಈಶ್ವರಪ್ಪ ಪತ್ರ, ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com