ಪಕ್ಷದಲ್ಲಿನ ಭಿನ್ನಾಭಿಪ್ರಾಯ ದೂರಾಗಿಸಲು ಸಮಿತಿ ರಚಿಸಿದ ಬಿಜೆಪಿ

ಸಾರ್ವಜನಿಕವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿರುವ ನಾಯಕರ ನಡೆಗೆ ಬ್ರೇಕ್ ಹಾಕಲು ಮುಂದಾಗಿರುವ ಬಿಜೆಪಿ, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿರುವ ನಾಯಕರ ನಡೆಗೆ ಬ್ರೇಕ್ ಹಾಕಲು ಮುಂದಾಗಿರುವ ಬಿಜೆಪಿ, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ತಿಳಿದುಬಂದಿದೆ. 

ಪಕ್ಷದ ಹಿರಿಯ ನಾಯಕರನ್ನೊಳಗೊಂಡ 15 ಮಂದಿ ಸದಸ್ಯರ ತಂಡವನ್ನು ರಚನೆ ಮಾಡಲಾಗಿದ್ದು, ಈ ಸಮಿತಿಯು ಪಕ್ಷದ ವಿರುದ್ಧ ಮಾತನಾಡುವವರ ಬಾಯಿಗೆ ಬೀಗ ಹಾಕುವ ಕೆಲಸ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ. 

ಈಗಾಗಲೇ ಪಕ್ಷದ ವಿರುದ್ಧ ಮಾತನಾಡಿದ್ದ ಸಿಪಿ ಯೋಗೇಶ್ವರ್ ಹಾಗೂ ಇತರೆ ಶಾಸಕರೊಂದಿಗೆ ಸಮಿತಿಯ ಸದಸ್ಯರು ಮಾತುಕತೆ ನಡೆಸಲಿದ್ದು, ಭಿನ್ನಾಭಿಪ್ರಾಯ ಶಮನಗೊಳಿಸಲು ಯತ್ನ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 

ಸಮಿತಿ ರಚನೆಯಷ್ಟೇ ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಅವರು ಎಲ್ಲಾ ಸಚಿವರೊಂದಿಗೆ ಇನ್ನು ಕೆಲವೇ ದಿನಗಳಲ್ಲಿ ಪ್ರತ್ಯೇಕವಾಗಿ ಸಭೆಗಳನ್ನೂ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಪಕ್ಷದ ಕಾರ್ಯಕ್ರಮಗಳು ಹಾಗೂ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಲು ಹಾಗೂ ಪಕ್ಷದ ಬಲ ಹೆಚ್ಚಿಸಲು ಪ್ರತೀ ತಿಂಗಳು ಸಮಿತಿ ಸಭೆ ನಡೆಸಲಿದೆ. ಈ ತಿಂಗಳೂ ಸಮಿತಿಯ ಮೊದಲ ಸಭೆ ನಡೆಯಲಿದೆ. ಪಕ್ಷದ ಶಾಸಕರು ಹಾಗೂ ನಾಯಕರಿಗೆ ಕೊರೋನಾ ಪರಿಹಾರ ಕಾರ್ಯಗಳತ್ತ ಹೆಚ್ಚಿನ ಗಮನ ಕೊಡುವಂತೆ ಸೂಚಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. 

ಸಮಿತಿಯ ಸದಸ್ಯರಾಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಮಾತನಾಡಿ, ಸಮಿತಿಯು ಮುಂದಿನ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸಲಿದೆ ಎಂದು ತಿಳಿಸಿದ್ದಾರೆ. 

ಒಂದೆಡೆ ಪಕ್ಷ ಅಸಮಾಧಾನಗೊಂಡಿರುವ ನಾಯಕರ ಸಮಾಧಾನಗೊಳಿಸಲು ಸಮಿತಿ ರಚಿಸಿ ಪ್ರಯತ್ನಗಳನ್ನು ನಡೆಸುತ್ತಿದ್ದರೆ ಮತ್ತೊಂದೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಅದೇ ರಾಗ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಯತ್ನಾಳ್ ಅವರು ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದರೂ, ಪಕ್ಷ ಮಾತ್ರ ಈ ವರೆಗೂ ಯತ್ನಾಳ್ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com