ಬೆಂಗಳೂರಿಗೆ ಅರುಣ್ ಸಿಂಗ್ ಭೇಟಿ: ಬಿಜೆಪಿ ಆಂತರಿಕ ಕಚ್ಚಾಟ, ನಾಯಕತ್ವ ಬದಲಾವಣೆ ಚರ್ಚೆಗೆ ತಾರ್ತಿಕ ಅಂತ್ಯ?

ನಾಯಕತ್ವ ಬದಲಾವಣೆ, ರಾಜ್ಯ ಸರ್ಕಾರದ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ಸಂಬಂಧ ಶಾಸಕರು ಮತ್ತು ಸಚಿವರೊಂದಿಗೆ ಮುಖಾಮುಖಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ 3 ದಿನಗಳ ಭೇಟಿಗಾಗಿ ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. 
ಅರುಣ್ ಸಿಂಗ್
ಅರುಣ್ ಸಿಂಗ್

ಬೆಂಗಳೂರು: ನಾಯಕತ್ವ ಬದಲಾವಣೆ, ರಾಜ್ಯ ಸರ್ಕಾರದ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ಸಂಬಂಧ ಶಾಸಕರು ಮತ್ತು ಸಚಿವರೊಂದಿಗೆ ಮುಖಾಮುಖಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ 3 ದಿನಗಳ ಭೇಟಿಗಾಗಿ ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. 

ಕೆಲ ಸಚಿವರು ಹಾಗೂ ಶಾಸಕರು ಪದೇ ಪದೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದ್ದರಿಂದ ಅಂತಿಮವಾಗಿ ಎಲ್ಲ ಸಚಿವರು-ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ ಉಸ್ತುವಾರಿಯನ್ನು ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಈ ಮೂರು ದಿನಗಳ ಸಭೆ ಬಳಿಕ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.

ಶಾಸಕರು ಆಗಮಿಸಿ ಸರ್ಕಾರ ಮತ್ತು ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯ, ಅಹವಾಲು ಸಲ್ಲಿಸಬಹುದಾಗಿದೆ. ಪ್ರತಿ ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾರಿಗೂ ನಿರ್ಬಂಧವಿಲ್ಲ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಬಹುದಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಕಳೆದ ಕೆಲವು ತಿಂಗಳುಗಳಲ್ಲಿ, ಬಸವರಾಜ್ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಎ.ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ, ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ತಮ್ಮದೇ ನಾಯಕರ ವಿರುದ್ಧ ಮಾಧ್ಯಮಗಳಲ್ಲಿ ಹರಿಹಾಯ್ದಿದ್ದರು.

ಸರ್ಕಾರದ ಮುಖ್ಯ ಸಚೇತಕ ಹಾಗೂ ಕಾರ್ಕರಳ ಶಾಸಕ ವಿ ಸುನೀಲ್ ಕುಮಾರ್ ಅವರು ಪಕ್ಷದ ಮುಖಂಡರನ್ನು ಶಾಸಕರು ತಮ್ಮ ಅಭಿಪ್ರಾಯ ಮತ್ತು ಕುಂದುಕೊರತೆಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವಂತೆ ಒತ್ತಾಯಿಸಿದ್ದರು.

ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಸಮನ್ವಯ ಸಮಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದ ಗೌಡ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್ ಅಶೋಕ, ಅರವಿಂದ್ ಲಿಂಬಾವಳಿ, ಜಗದೀಶ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಮತ್ತು ಇತರರು ಸೇರಿದ್ದಾರೆ. ಪಕ್ಷದ ಮುಖಂಡರನ್ನು ನಮ್ಮ ಪ್ರಧಾನ ಕಚೇರಿ ಕೇಶವ ಕೃಪಾಗೆ ಕರೆದು ಅಥವಾ ಅವರಿರುವ ಸ್ಥಳಕ್ಕೆ ನಾವೇ ಹೋಗಿ ಅವರ ಕುಂದು ಕೊರತೆಗಳನ್ನು ಆಲಿಸುತ್ತೇವೆ ಎಂದು ಬಿಜೆಪಿ ರಾಜ್ಯ
ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಹೇಳಿದ್ದಾರೆ.

ನಾವು ನಮ್ಮ ಮಿತಿಗಳನ್ನು ಅವರಿಗೆ ಹೇಳುತ್ತೇವೆ  ಹಾಗೂ ಅವುಗಳನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತೇವೆ, ಒಂದು ವೇಳೆ ಅವರು ಒಪ್ಪದಿದ್ದರೆ, ನಮ್ಮೊಂದಿಗೆ ಕುಳಿತು ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಕೋವಿಡ್ ಬಿಕ್ಕಟ್ಟಿನ ಜೊತೆಗೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉಪಚುನಾವಣೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆಗಳು ನಡೆಯಲಿವೆ. ನಾವು ಬಹಿರಂಗವಾಗಿ ಕಿತ್ತಾಡಿದರೇ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ನಾಯಕರು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅರುಣ್ ಸಿಂಗ್ ಅವರ ಭೇಟಿಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ

ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಈಗಾಗಲೇ  ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com