ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸರ್ಕಾರ ರೂ.65 ತೆರಿಗೆ ಸಂಗ್ರಹಿಸುತ್ತಿದೆ: ಡಿ.ಕೆ. ಶಿವಕುಮಾರ್

ರೂ.35 ಬೆಲೆಯ ಪೆಟ್ರೋಲ್'ಗೆ ರೂ.65 ತೆರಿಗೆ ಸೇರಿಸಿ ರೂ.100ಕ್ಕೆ ಪ್ರತೀ ಲೀಟರ್ ಪೆಟ್ರೋಲ್ ಮಾರಾಟ ಮಾಡುತ್ತಿರುವ ಸರ್ಕಾರ ಪ್ರತೀ ಲೀಟರ್ ಬೆಲೆಯ ಮೇಲೆ ರೂ.65 ತೆರಿಗೆ ಸಂಗ್ರಹಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ರೂ.35 ಬೆಲೆಯ ಪೆಟ್ರೋಲ್'ಗೆ ರೂ.65 ತೆರಿಗೆ ಸೇರಿಸಿ ರೂ.100ಕ್ಕೆ ಪ್ರತೀ ಲೀಟರ್ ಪೆಟ್ರೋಲ್ ಮಾರಾಟ ಮಾಡುತ್ತಿರುವ ಸರ್ಕಾರ ಪ್ರತೀ ಲೀಟರ್ ಬೆಲೆಯ ಮೇಲೆ ರೂ.65 ತೆರಿಗೆ ಸಂಗ್ರಹಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ಪೆಟ್ರೋಲ್ ಡೀಸೆಲ್ ದರ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು,ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಜನಸಾಮಾನ್ಯರ ಕಾರ್ಯಕ್ರಮ. ಇದು ರೈತರು, ವರ್ತಕರ ಕಾರ್ಯಕ್ರಮ. ಹೈರಾಣಾಗಿರುವ ಜನರ ಬದುಕು ಬದಲಿಸಲು ಈ ಹೋರಾಟ. 35 ರೂ ಬೆಲೆಯ ಪೆಟ್ರೋಲ್ ಗೆ 65 ರೂ. ತೆರಿಗೆ ಸೇರಿಸಲಾಗಿದೆ. ಎಲ್ಲ ಪಕ್ಷದವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿದೆ. ಕೆಲವು ಕಡೆ ಬೆಲೆ ವ್ಯತ್ಯಾಸ ಕುರಿತು ಜನರಿಗೆ ಅರಿವು ಮೂಡಿಸಲು, ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ 50 ರುಪಾಯಿ ನೀಡಿ ಪ್ರತಿಭಟಿಸುತ್ತಿದ್ದಾರೆ. ಕೆಲವರು ಸಿಹಿ ಹಂಚಿದರೆ, ಮತ್ತೆ ಕೆಲವರು ಜಾಗಟೆ ಬಾರಿಸಿ ಪ್ರತಿಭಟಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಪೆಟ್ರೋಲ್ ಬೆಲೆ 52 ರುಪಾಯಿ ಆದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಸೈಕಲ್ ತುಳಿದಿದ್ದ ಫೋಟೋ ನಮ್ಮ ಬಳಿ ಇದೆ. ಅದನ್ನು ಈಗ ಅವರಿಗೆ ಗಿಫ್ಟ್ ಆಗಿ ಕಳುಹಿಸಿ ಕೊಡುತ್ತೇನೆ. ಶೋಭಾ ಕರಂದ್ಲಾಜೆ ಅವರು ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತುಕೊಂಡು ಹೋರಾಟ ಮಾಡಿದ್ದೇ ಮಾಡಿದ್ದು. ಈಗ ಅವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ರಾಮಜನ್ಮ ಭೂಮಿ ಹಗರಣ ಕುರಿತು ಮಾತನಾಡಿದ ಅವರು, ‘ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ. ಆದರೆ ರಾಮಮಂದಿರ ನಿರ್ಮಾಣದಲ್ಲೇ ಅಕ್ರಮ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ. ಭಾರತೀಯ ಸಂಸ್ಕೃತಿಗೆ, ನಮ್ಮ ಭಾವನೆಗೆ, ಧರ್ಮಕ್ಕೆ ಮಾಡಿದ ಅಪಚಾರವಾಗಿದೆ. 

ರಾಮ ಮಂದಿರ ನಿರ್ಮಾಣಕ್ಕಾಗಿ ಹಳ್ಳಿ, ಹಳ್ಳಿಗಳಲ್ಲಿ ಜನ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗಿರುವಾಗ ಇವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಮಾಡಿ ದ್ರೋಹ ಬಗೆದಿದ್ದಾರೆ. ಇದನ್ನು ಇಡೀ ದೇಶ ಖಂಡಿಸಬೇಕು. ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com