ಸೂಟು-ಬೂಟು ಹಾಕಿಕೊಂಡ ಒಂದಿಬ್ಬರು ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ಎಂ.ಪಿ.ರೇಣುಕಾಚಾರ್ಯ

ಇನ್ನು ಎರಡು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಸಿಎಂ ನಾಯಕತ್ವ ಬದಲಾವಣೆಯಾಗಬಾರದು, ಮುಖ್ಯಮಂತ್ರಿ ಬದಲಾವಣೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಚರ್ಚೆಯೇ ಅಪ್ರಸ್ತುತ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಎಂ ಪಿ ರೇಣುಕಾಚಾರ್ಯ
ಎಂ ಪಿ ರೇಣುಕಾಚಾರ್ಯ

ಬೆಂಗಳೂರು: ಇನ್ನು ಎರಡು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಸಿಎಂ ನಾಯಕತ್ವ ಬದಲಾವಣೆಯಾಗಬಾರದು, ಮುಖ್ಯಮಂತ್ರಿ ಬದಲಾವಣೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಚರ್ಚೆಯೇ ಅಪ್ರಸ್ತುತ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸಕ್ಕೆ ಹೊರಟಿದ್ದ ಅವರು ನಂತರ ಅರುಣ್ ಸಿಂಗ್ ಅವರು ಕರೆದಿರುವ ಸಭೆಯಲ್ಲಿ ಹಾಜರಾಗಲಿದ್ದಾರೆ. ಅವರ ಜೊತೆ ಸಿಎಂ ಯಡಿಯೂರಪ್ಪ ಪರ ಶಾಸಕರ ಟೀಂ ಕೂಡ ಇತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ, ಯಡಿಯೂರಪ್ಪನವರು ಪ್ರಶ್ನಾತೀತ ಸರ್ವಶ್ರೇಷ್ಠ ನಾಯಕರು ಅವರ ಬದಲಾವಣೆಯಿಲ್ಲ ಎಂದು ರಾಷ್ಟ್ರ ನಾಯಕರಾದ ಅರುಣ್ ಸಿಂಗ್ ಅವರು ಕೂಡ ಹೇಳಿದ್ದಾರೆ. ಹೀಗಾಗಿ ಪದೇ ಪದೇ ಆ ಬಗ್ಗೆ ಚರ್ಚೆ ಮಾಡುವುದು, ಮಾಧ್ಯಮಗಳ ಮುಂದೆ ದಿನಕ್ಕೊಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶದಿಂದ ರೇಣುಕಾಚಾರ್ಯ ಹೇಳಿದರು.

ಇಲ್ಲಿ ಒಂದಿಬ್ಬರು ಸೂಟು-ಬೂಟು ಹಾಕಿಕೊಂಡವರು ರಾಜ್ಯದ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ, ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ. ಹೋರಾಟದಿಂದ ಕಷ್ಟಪಟ್ಟು ಮುಂದೆ ಬಂದ ಯಡಿಯೂರಪ್ಪನವರು ಈ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು, ಅವರನ್ನು ಬಿಟ್ಟರೆ ನಾಯಕತ್ವ ವಹಿಸಿಕೊಳ್ಳುವ ಮತ್ತೊಬ್ಬರು ಸದ್ಯಕ್ಕಿಲ್ಲ. ಬಂಡಾಯ ಎದ್ದ ಕೆಲವರು ಯಡಿಯೂರಪ್ಪನವರ ಹೆಸರು ಹೇಳಿಕೊಂಡೇ ಮುಂದೆ ಬಂದು ಶಾಸಕರಾದವರು, ಅವರ ಹೆಸರಿನಲ್ಲಿ ಅಧಿಕಾರ ಪಡೆಯುವ ತಾಕತ್ತು ಅವರಿಗಿಲ್ಲ. ಈಗ ನಾಯಕತ್ವದ ಮಾತುಗಳನ್ನಾಡುತ್ತಿದ್ದಾರೆ. ಅಸಮಾಧಾನಗೊಂಡರೆ ದೆಹಲಿಗೆ ಹೋಗುವುದು, ಅಲ್ಲಿ ವರಿಷ್ಠರ ಮುಂದೆ ಒಂದು ಮಾತನಾಡುವುದು, ಹೊರಗೆ ಬಂದ ಮೇಲೆ ಮಾಧ್ಯಮಗಳ ಮುಂದೆ ಮತ್ತೊಂದು ಮಾತನಾಡುವುದು ಅಭ್ಯಾಸವಾಗಿಬಿಟ್ಟಿದೆ ಎಂದರು.

ಇಂದು ಬೆಳಗ್ಗೆ ನನ್ನ ನಿವಾಸದಲ್ಲಿ ಶಾಸಕರಿಗೆ ಉಪಾಹಾರಕ್ಕೆ ಸಿದ್ದ ಮಾಡಿದ್ದೆವು. ಅದಕ್ಕೆ ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಕರೆ ಮಾಡಿ ಉಪಾಹಾರ ನಡೆಸುವುದು ಬೇಡ, ಅದರಿಂದ ಬೇರೆ ಸಂದೇಶ ರವಾನೆಯಾಗಬಹುದು ಎಂದು ಹೇಳಿದರು. ಹಾಗಾಗಿ ರದ್ದಾಯಿತು. ಇಂದು ಕೆಲವು ಶಾಸಕರು ನನ್ನ ನಿವಾಸ ಬಳಿ ಬಂದಿದ್ದಾರೆ, ಇಲ್ಲಿ ಯಡಿಯೂರಪ್ಪನವರ ಬದಲಾವಣೆಯ ಮಾತುಕತೆ ಬಂದಿಲ್ಲ ಎಂದರು.

ಇದು ರಾಜಕೀಯ ಮಾಡುವ ಸಮಯವೇ?:ಕೊರೋನಾದ ಈ ಸಮಯದಲ್ಲಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ವಾರಿಯರ್ ಗಳಂತೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಕಷ್ಟಗಳನ್ನು ಆಲಿಸಿ ಸಹಾಯ ಮಾಡುವ ಸಮಯವಿದು. ಹೀಗಿರುವಾಗ ನಾಯಕತ್ವ ಬದಲಾವಣೆ ಚರ್ಚೆ, ಪ್ರಶ್ನೆ ಈಗ ಏಕೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com