'ತಮಿಳುನಾಡು ರೈತರಿಗೆ ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ, ರೈತರೆಂದರೆ ಭೂತಾಯಿಯ ಮಕ್ಕಳು'

ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಿಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು.

Published: 18th June 2021 12:06 PM  |   Last Updated: 18th June 2021 12:06 PM   |  A+A-


CM stalin

ತಮಿಳುನಾಡು ಸಿಎಂ ಸ್ಟಾಲಿನ್

Posted By : Shilpa D
Source : Online Desk

ಬೆಂಗಳೂರು: ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಿಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ನಾವು ಒಗ್ಗಟ್ಟಾಗೇ ಉಳಿಯಬೇಕು. ಸ್ಟಾಲಿನ್ ಅವರ ಅಧಿಕಾರವಧಿಯಲ್ಲಿ ಈ ಪ್ರಯತ್ನ ಆಗಲಿ. ಅದಕ್ಕೆ ನನ್ನ ಬೆಂಬಲ ಇರಲಿದೆ. ಈ ರಾಜ್ಯಗಳ ಸೋದರತೆ ರಕ್ಷಣೆ ಈಗಿನ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದಕ್ಷಿಣ ಭಾರತದ ರಾಜ್ಯಗಳು, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಒಗ್ಗಟ್ಟು ಕಾವೇರಿ ವಿಚಾರದ ಮೂಲಕ ಒಡೆದುಹೋಗಬಾರದು. ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್‌ ಗಮನಿಸಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ರೈತರನ್ನು ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ. ರೈತರೆಂದರೆ ರೈತರೇ,ಭೂಮಿತಾಯಿಯ ಮಕ್ಕಳು. ನಮ್ಮ ಅಣ್ಣ ತಮ್ಮಂದಿರು. ಕಾವೇರಿ ವಿಚಾರದಲ್ಲಿ ಈಗ ನಾವಿಬ್ಬರು. ಅಂದರೆ ರಾಜಕಾರಣಿಗಳೂ ಅಣ್ಣತಮ್ಮಂದಿರಾಗೋಣ. ಸೋದರ ಭಾವನೆಯೊಂದಿಗೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಬಂದರೆ ನಾನಂತೂ
ಎರಡು ಹೆಜ್ಜೆ ಮುಂದಿಡುವೆ ಎಂದಿದ್ದಾರೆ.

ಸ್ಟಾಲಿನ್‌ ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯವನ್ನು ಆಗಲು ಬಿಡಲಿ. ಇದರಿಂದ ತಮಿಳುನಾಡಿಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಇದು ನೀರಾವರಿ ಉದ್ದೇಶದ ಯೋಜನೆಯಲ್ಲ. ಬದಲಿಗೆ ಕುಡಿಯುವ ನೀರಿನ ಉದ್ದೇಶದ ಯೋಜನೆಯಾಗಿದೆ. ಈ ವಿಚಾರವನ್ನು ಸ್ಟಾಲಿನ್‌ ಅವರು ಗಮನಿಸಬೇಕು. ಜಲಾಶಯದ ವಿಚಾರದಲ್ಲಿ ಕರ್ನಾಟಕದೊಂದಿಗೆ ಸಹಕರಿಸಬೇಕು ಎಂದಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ತಮಿಳುನಾಡಿಗೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಕೊಟ್ಟಿದೆ. ಪಕೃತಿ ಸಹಕರಿಸಿದಾಗ ಹೆಚ್ಚಿನ ನೀರನ್ನು ಹರಿಸಿದೆ. ಬರಗಾಲದಂಥ ಸಂದರ್ಭದಲ್ಲೂ ಕರ್ನಾಟಕವು ತಮಿಳುನಾಡಿಗೆ ಎಂದೂ ದ್ರೋಹ ಬಗೆದಿಲ್ಲ. ಹೀಗಾಗಿ ನೀರಿನ ಹಂಚಿಕೆ ವಿಚಾರದಲ್ಲಿ ಸೋದರ ಸ್ಟಾಲಿನ್ ಅವರಿಗೆ ಯಾವ ಅನುಮಾನಗಳೂ, ಆತಂಕಗಳೂ ಬೇಡ ಎಂದು ಕಿವಿಮಾತು ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp