ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಿಸಲಿದೆ: ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ. 
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಕೂಗ ಎದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ ನಡೆದಿರುವ ಹೇಳಿಕೆಗಳು ತಾತ್ಕಾಲಿಕ ಅಷ್ಟೇ. ಆದರೆ, ಶಾಸಕಾಂಗ ಸಭೆ ಒಪ್ಪಿಗೆ ನೀಡಿದ ಬಳಿಕವೇ ಮುಖ್ಯಮಂತ್ರಿಗಳು ಯಾರು ಆಗಬೇಕೆಂಬುದು ಅಂತಿಮವಾಗುತ್ತದೆ ಎಂದು ಹೇಳಿದ್ದಾರೆ. 

ಪಕ್ಷಕ್ಕೆ ಇದು ಹೊಸದಲ್ಲ. ಹಿಂದಿನಿಂದಲೂ ಇದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ. ಈಗಲೂ ಅಷ್ಟೇ ಎಂದ ಸತೀಶ್ ಜಾರಕಿಹೊಳಿಯವರು, ಸಾಮಾನ್ಯವಾಗಿ ಮುಖ್ಯಮಂತ್ರಿ ಸ್ಥಾನ ಅಂತ ಬಂದಾಗ ಇಬ್ಬರು ಮೂವರು ಸ್ಪರ್ಧಿಗಳು ಇರುವುದು ಸಹಜ. ಹಾಗೆಂದು ಅವುಗಲನ್ನು ಬಣಗಳನ್ನಾಗಿ ನೋಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇಂತಹ ಪ್ರಶ್ನೆಗಳು ಸಹಜವಾದರೂ ಅಂತಿಮವಾಗಿ ಶಾಸಕಾಂಗ ಸಭೆ ಹಾಗೂ ಹೈಕಮಾಂಡ್ ನಿಂದ ಆಯ್ಕೆ ಮಾಡಲಾಗುತ್ತದೆ. ಸದ್ಯ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಎಲ್ಲರೂ ಪ್ರಯತ್ನಿಸಬೇಕಿದೆ. ಅದಕ್ಕಾಗಿ ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಲ್ಲರೂ ಸೇರಿ ಆ ಪ್ರಯತ್ನವನ್ನು ಮಾಡುತ್ತಿದ್ದೇವೆಂದಿದ್ದಾರೆ. 

ಇದೇ ವೇಳೆ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಎಂದ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ. ನಮ್ಮಲ್ಲಿ ಜಮೀರ್ ಅವರು ಆಲ್ ರೌಂಡರ್. ಆಗಾಗ ಸಿಕ್ಸರ್ ಹೊಡೆಯುತ್ತಿರುತ್ತಾರೆ. ಗೆಲ್ಲಬೇಕಾದಾಗ ಅದು ಅನಿವಾರ್ಯ. ಆದರೆ, ಸದ್ಯ ಅವರವರ ಅಭಿಮಾನ ಪ್ರೀತಿಯಿಂದ ಹಾಗೆ ಹೇಳಿರಬಹುದು. ಕೆಲವರು ಸಿದ್ದರಾಯ್ಯ ಹೆಸರು ಹೇಳಿದರೆ, ಇನ್ನೂ ಕೆಲವರು ಡಿಕೆ ಶಿವಕುಮಾರ್ ಹಾಗೂ ನಮ್ಮ ಹೆಸರೂ ಹೇಳುತ್ತಾರೆ. ಈ ಬಗ್ಗೆ ತಪ್ಪು ಗ್ರಹಿಕೆ ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಇದ್ದೇವೆಂದು ಹೇಳಿದ್ದಾರೆ. 

ಬಳಿಕ ತಮ್ಮ ಸಹೋದರ ರಮೇಶ್ ಜಾರಕಿಹೊಳಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com