ಡೆಲ್ಟಾ ಪ್ಲಸ್ ವೈರಸ್ ಭೀತಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ರೂಪಾಂತರಿ ವೈರಸ್ಸನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ಉಗ್ರವಾದ ಕೊರೋನಾದ ರೂಪಾಂತರಿ ವೈರಸ್ಸು ದೇಶದಲ್ಲಿ ಮತ್ತೆ ವೇಗವಾಗಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವಾರು ಸಲಹೆ ನೀಡಿದ್ದಾರೆ. ದೇಶದ ಶೇ.80 ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವುದು ಸೂಕ್ತ. ದೇಶದ ಯಾವ ಯಾವ ಸ್ಥಳಗಳಲ್ಲಿ  ಕೊರೋನ ವೈರಸ್ಸಿನ  ಡೆಲ್ಟಾ ಪ್ಲಸ್  ಪ್ರಬೇಧ ಪತ್ತೆಯಾಗಿದೆಯೊ ಆ ಸ್ಥಳಗಳ ಕುರಿತು ತೀವ್ರ ನಿಗಾ ವಹಿಸಿ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಹೊಸ ಹೊಸ ತಳಿಗಳಾಗಿ ಅತ್ಯಂತ ವೇಗವಾಗಿ ರೂಪಾಂತರ ಹೊಂದುತ್ತಿದೆ. ಪರಿಸ್ಥಿತಿ ಹೀಗಿರುವಾಗ  ಸರ್ಕಾರಗಳು ವ್ಯಾಪಕವಾಗಿ ಮತ್ತು  ಉಚಿತವಾಗಿ ಸಾರ್ವಜನಿಕ ಆಂದೋಲನಗಳ ಮೂಲಕ ಲಸಿಕೆಗಳನ್ನು ನೀಡಬೇಕು. ಈಗ ರಾಜ್ಯಗಳ ಬಳಿ 2.5 ಕೋಟಿ ಡೋಸ್ ಲಸಿಕೆಗಳಿವೆ ಎಂದು ಬೇರೆ ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಬಳಿ ಎಷ್ಟಿವೆ ಎಂದು ಹೇಳುತ್ತಿಲ್ಲ. ಲಸಿಕೆ ಉತ್ಪಾದಕ ಕಂಪೆನಿಗಳು ಪ್ರತಿ ದಿನ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ನೀಡಿದ ಲಸಿಕೆಗಳ ಕುರಿತು ಪ್ರಕಟಣೆಗಳನ್ನು ಹೊರಡಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮೂರನೆ ಅಲೆಯ ಕುರಿತು ತಜ್ಞರು ಮಾಡಿರುವ ಶಿಫಾರಸ್ಸುಗಳಂತೆ, ಖಾಸಗಿ ಆಸ್ಪತ್ರೆಗಳು ಕಂಪೆನಿಗಳಿಂದ ಲಸಿಕೆಗಳನ್ನು ಸ್ವೀಕರಿಸಿ ಗರಿಷ್ಠ 10 ದಿನಗಳ ಕಾಲ ಮಾತ್ರ ದಾಸ್ತಾನಿರಿಸಿಕೊಳ್ಳಬೇಕೆಂಬ ಕುರಿತು ಆದೇಶ ಹೊರಡಿಸುವಂತೆ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ತುರ್ತಾಗಿ ಮಾಡಬೇಕಾದ ಕೆಲಸ ಇದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ದೇಶದ ಸಮಸ್ತ ಜನರಿಗೆ ಮುಂದಿನ ಮೂರು- ನಾಲ್ಕು ತಿಂಗಳಲ್ಲಿ ಲಸಿಕೆ ಹಾಕುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಲಸಿಕೆಗಳ ಮೇಲಿನ ಪೇಟೆಂಟುಗಳನ್ನು ಮೊದಲು ಕಿತ್ತು ಹಾಕಬೇಕು ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. 

ಪ್ರತಿಯೊಬ್ಬರಿಗೂ ಲಸಿಕೆ, ಹೊಟ್ಟೆಗೆ ಅನ್ನ, ಒಂದಿಷ್ಟು ಆರ್ಥಿಕ ನೆರವು, ಉಚಿತ ಚಿಕಿತ್ಸೆ ನೀಡದಿದ್ದರೆ ಭಾರತ ವಿಶ್ವ ಗುರುವಾಗುವುದಿರಲಿ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಮತ್ತಿತರ  ಸರೀಕ ದೇಶಗಳ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಲಾಗದು ಎಂಬ ತಿಳಿವಳಿಕೆಯನ್ನು ಪ್ರಧಾನಿ ಮೋದಿಯವರಿಗೆ ತಿಳಿಸಬೇಕೆಂದು  ನಮ್ಮ ರಾಜ್ಯದಿಂದ ಆಯ್ಕೆಯಾದ ಸಂಸದರುಗಳನ್ನು ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com