ಸಚಿವ ಎಂಟಿಬಿ ನಾಗರಾಜ್ ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ: ಬೆಂಗಳೂರು ನಗರ ಮೇಲೆ ಆರ್.ಅಶೋಕ್ ಕಣ್ಣು!
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಈ ಹಿಂದೆ ಆರ್ ಅಶೋಕ್ ಅವರ ಕೈಯಲ್ಲಿ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಿತ್ತು.
Published: 24th June 2021 07:57 AM | Last Updated: 24th June 2021 12:19 PM | A+A A-

ಎಂಟಿಬಿ ನಾಗರಾಜ್ ಮತ್ತು ಆರ್ ಅಶೋಕ್(ಸಂಗ್ರಹ ಚಿತ್ರ)
ಬೆಂಗಳೂರು: ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಈ ಹಿಂದೆ ಆರ್ ಅಶೋಕ್ ಅವರ ಕೈಯಲ್ಲಿ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಿತ್ತು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೋವಿಡ್-19 ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಬದಲಾವಣೆ ಮಾಡಿದ್ದು ಸ್ವತಃ ಆರ್ ಅಶೋಕ್ ಅವರೇ ಎಂಟಿಬಿ ನಾಗರಾಜ್ ಅವರನ್ನು ನೇಮಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.
ಎಂಟಿಬಿ ನಾಗರಾಜ್ ಅವರು ಈ ಹಿಂದೆ ತಮ್ಮ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅವರನ್ನು ಸಮಾಧಾನಪಡಿಸಲು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಹುದ್ದೆಯನ್ನು ನೀಡಲು ಸ್ವತಃ ಅಶೋಕ್ ಅವರೇ ಮುಖ್ಯಮಂತ್ರಿಗಳಿಗೆ ಸೂಚಿಸಿದರು ಎಂದು ಹೇಳಲಾಗುತ್ತಿದೆ. ಇನ್ನು ತಮ್ಮಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹುದ್ದೆ ಕೈತಪ್ಪಿ ಹೋಗಿರುವುದಕ್ಕೆ ಯಾವ ಬೇಸರವೂ ಇಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಅದರ ಬದಲಿಗೆ ಸಚಿವ ಅಶೋಕ್ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಹುದ್ದೆ ಮುಖ್ಯಮಂತ್ರಿಗಳ ಬಳಿಯೇ ಇದೆ. ಬೆಂಗಳೂರು ನಗರದಿಂದ 12ಕ್ಕೂ ಹೆಚ್ಚು ಸಚಿವರು ಯಡಿಯೂರಪ್ಪ ಸಂಪುಟದಲ್ಲಿದ್ದಾರೆ. ಆದರೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಹುದ್ದೆ ಮುಖ್ಯಮಂತ್ರಿಗಳ ಬಳಿಯೇ ಇದೆ.
ಕಂದಾಯ ಸಚಿವ ಅಶೋಕ್ ಅವರನ್ನು ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ, ನಾಯಕತ್ವ ಬದಲಾವಣೆ ಕೂಗಿನ ಸಂದರ್ಭದಲ್ಲಿ ಯಡಿಯೂರಪ್ಪ ಪರವಾಗಿ ಗಟ್ಟಿಯಾಗಿ ನಿಂತಿದ್ದ ಅಶೋಕ್ ಅವರಿಗೆ ಕೃತಜ್ಞತೆಯನ್ನು ತೋರಿಸಿದ್ದಾರೆ ಎಂದು ಹೇಳಬಹುದು.
ಈ ಮಧ್ಯೆ ಡಿಸಿಎಂ ಅಶ್ವಥ ನಾರಾಯಣ ಕೂಡ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದಾರೆ. ನಾಯಕತ್ವ ಬದಲಾವಣೆ ಕೂಗಿನ ಸಮಯದಲ್ಲಿ ಆರ್ ಅಶೋಕ್ ಮತ್ತು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ನಿಂತಿದ್ದು ಮಾತನಾಡಿದ್ದರು.
ಇನ್ನು ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿ ಸುದ್ದಿಯಾಗಿದ್ದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.